ಅವೈಜ್ಞಾನಿಕ ತಾಲೂಕು ವಿಂಗಡಣೆ ಅಭಿವೃದ್ದಿಗೆ ತೊಡಕು; ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ ಅಸಮಧಾನ.
ಚಿತ್ತಾಪುರ ತಾಲೂಕನ್ನು ಅವೈಜ್ಞಾನಿಕ ವಿಭಜನೆ ಮಾಡಿದ್ದರಿಂದ ಆಡಳಿತಾತ್ಮಕ ಅನಾನೂಕೂಲವಾಗುತ್ತಿದೆ. ಮೂವರು ತಹಶೀಲ್ದಾರ, ಮೂವರು ತಾಪಂ ಇಓ, ಮೂವರು ಸಿಪಿಐ, ಮೂವರು ಪಿಎಸ್ ಐಗಳು ನನ್ನ ವ್ಯಾಪ್ತಿಗೆ ಬರುತ್ತಾರೆ. ಇವರೆಲ್ಲ ಚಿತ್ತಾಪುರ, ಕಾಳಗಿ ಹಾಗೂ ಶಹಾಬಾದ್ ತಾಲೂಕಿಗೆ ಸಂಬಂಧಿಸಿದವರು ಕಾಳಗಿ ತಾಲೂಕಿಗೆ ಹಾಗೂ ಶಹಾಬಾದ್ ತಾಲೂಕಿಗೆ ಚಿತ್ತಾಪುರ ಮತಕ್ಷೇತ್ರದ ಕ್ರಮವಾಗಿ 12 ಹಾಗೂ 4 ಹಳ್ಳಿಗಳು ಸೇರುತ್ತವೆ. ಅನುದಾನ ಬಳಕೆ ಹಾಗೂ ಅಭಿವೃದ್ದಿಗೆ ಇದು ತೊಡಕಾಗಿದೆ ಇದನ್ನು ಬಿಜೆಪಿ ಸರ್ಕಾರ ಹಾಗೂ ಅವೈಜ್ಞಾನಿಕ ವಿಭಜನೆಗೆ ಯತ್ನಿಸಿದ ಬಿಜೆಪಿಯ ನಾಯಕರು ಮನಗಾಣಬೇಕು ಎಂದು ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಅಭಿವೃದ್ದಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ಈ ನಿರ್ಧಾರದ ವಿರುದ್ಧ ಈಗಾಗಲೇ ಹೈಕೋರ್ಟ್ ನಲ್ಲಿ ಕೇಸು ದಾಖಲಿಸಿದ್ದೇನೆ. ಸರ್ಕಾರ ಇದೂವರೆಗೆ ಉತ್ತರ ನೀಡಿಲ್ಲ. ಇದು ಜನರಪರವಾದ ಆಡಳಿತ ಎನ್ನಲಾಗುತ್ತದೆಯೇ ಎಂದು ಅಸಮಧಾನ ವ್ಯಕ್ತಪಡಿಸಿದರು.

ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು. ಜಲಜೀವನ ಮಿಷನ್ ಅಡಿಯಲ್ಲಿ ಉದ್ದೇಶಿತ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಈ ನಿಟ್ಟಿನಲ್ಲಿ ಶಹಾಬಾದ್, ಕಾಳಗಿ ಹಾಗೂ ಚಿತ್ತಾಪುರ ತಾಪಂ ಇಓ ಗಳು ಸಭೆ ನಡೆಸಿ ಎಂದು ಸೂಚಿಸಿದರು.
ದಿಗ್ಗಾಂವ, ಮುಗುಳನಾಗಾಂವ, ಇಂಗಳಗಿ- ಕೈಲಾಶ್ ನಗರ, ಭೀಮನಳ್ಳಿ ಗ್ರಾಮಗಳಲ್ಲಿ ಹಾಗೂ ಯರಗಲ್ ತಾಂಡಾ ಕುಡಿಯುವ ನೀರಿನ ತೊಂದರೆ ಕುರಿತು ಮಾಹಿತಿ ಪಡೆದ ಶಾಸಕರು, ಬೋರ್ ವೆಲ್ ಕೊರೆಸುವುದು ಹಾಗೂ ಪೈಪ್ ಲೈನ್ ಹಾಕಿಸುವ ಕೆಲಸ ಬೇಗ ಕೈಗೊಳ್ಳಬೇಕು. ಇದಕ್ಕೆ ಬೇಕಾಗುವ ಅನುದಾನ ಒದಗಿಸಲಾಗುವುದು ಎಂದರು.
ಕುಡಿಯುವ ನೀರಿನ ಕಾಮಗಾರಿಗಳನ್ನು ಎ,ಬಿ,ಸಿ ಎಂದು ವಿಭಾಗಿಸಿ ಪಟ್ಟಿ ಮಾಡಿ. ಒಂದು ವಾರದಲ್ಲೇ ಮುಗಿಯುವ ಕಾಮಗಾರಿಗಳನ್ನು ಎ- ವಿಭಾಗದಲ್ಲಿ ಸೇರಿಸಿ, ಹದಿನೈದು ದಿನದಲ್ಲಿ ಕಾಮಗಾರಿಗಳನ್ನು ಬಿ – ವಿಭಾಗದಲ್ಲಿ ಹಾಗೂ ಅನುದಾನ ಲಭ್ಯತೆ ಆಧಾರಿಸಿ ಮುಗಿಸುವಂತ ಕಾಮಗಾರಿಗಳನ್ನು ಸಿ- ವಿಭಾಗದಲ್ಲಿ ಸೇರಿಸಿ. ಕಾಮಗಾರಿಗೆ ಟಾಸ್ಕ್ ಫೋರ್ಸ್ ನಲ್ಲಿ ಅನುದಾನ ಲಭ್ಯವಿರದಿದ್ದರೆ ಶಾಸಕರ ಫಂಡಿನಲ್ಲಿ ಅನುದಾನ ಒದಗಿಸಲಾಗುವುದು. ಕುಡಿಯುವ ನೀರಿನ ತೊಂದರೆ ಎದುರಾಗದಂತೆ ಕ್ರಮವಹಿಸಲೇಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪಿಡಿಓಗಳು ಸರ್ಕಾರಿ ಕೆಲಸ ಮಾತ್ರ ಮಾಡಿ. ಕೆಲವರು ರಾಜಕೀಯ ಮಾಡಿಕೊಂಡು ತಿರುಗುತ್ತಿದ್ದೀರಿ. ಹಾಗೇ ರಾಜಕೀಯ ಮಾಡಲೇಬೇಕಿದ್ದರೆ ತಿಳಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾದ ಮೂವರು ಪಿಡಿಓಗಳನ್ನು ಈಗಾಗಲೇ ಅಮಾನತ್ತು ಮಾಡಲಾಗಿದೆ. ಹಾಗೆ ಅಮಾನತ್ತಾದವರಿಗೆ ಅರ್ಧ ಸಂಬಳವೂ ಕೂಡಾ ಸಿಗದಂತೆ ನಿಯಮ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ನರೇಗಾ ಅಡಿಯಲ್ಲಿ ಹೊಸ ಕರೆ ನಿರ್ಮಾಣ ಮಾಡಲು ಜನಪ್ರತಿನಿಧಿಗಳ ಜೊತೆಗೆ ಚರ್ಚೆ ನಡೆಸಿ ಎಂದು ಪಿಡಿಓಗಳಿಗೆ ಸೂಚಿಸಿದ ಶಾಸಕರು ಮಾನವ ದಿನಗಳ ಹೆಚ್ಚು ಮಾಡಲು ಸಚಿವರೊಂದಿಗೆ ಮಾತನಾಡಲು ಸಹಕಾರಿಯಾಗುತ್ತದೆ ಎಂದರು.
ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ಶೌಚಾಲಯಕ್ಕೆ ರೂ 25 ಲಕ್ಷ ಖರ್ಚು ಮಾಡಲಾಗುತ್ತಿದ್ದು, ಮಹಿಳೆಯರಿಗೆ ಸೂಕ್ತ ಸ್ಥಾನ ಮಾನ ಕೊಡಲು ಪ್ರತಿ ಗ್ರಾಮದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಪ್ರಾಯೋಗಿಕವಾಗಿ ಗ್ರಾಮ ಪಂಚಾಯತಗಳಲ್ಲಿ ನಿರ್ಮಾಣ ಮಾಡಲಾಗುವುದು. ಸದರಿ ಶೌಚಾಲಯಗಳ ನಿರ್ಮಾಣಕ್ಕಾಗಿ ನಿವೇಶನ ಸಿಕ್ಕಿರದ ಕಡೆಗೆ ನಿವೇಶನ ಪಡೆದುಕೊಳ್ಳಿ ಎಂದರು. ಆಗ ಪ್ರತಿಕ್ರಿಯಿಸಿದ ಪಿಡಬ್ಲೂಡಿ ಇಂಜಿನಿಯರ್ ಅಣೆಪ್ಪ ಕುದರಿ ಅವರು ಆದಷ್ಟು ಬೇಗ ಟೆಂಡರ್ ಕರೆಯಲಾಗುವುದು ಎಂದರು. ಇದು ನನ್ನ ಕನಸಿನ ಯೋಜನೆಯಾಗಿದ್ದು ಕಾಮಗಾರಿಯಲ್ಲಿ ಯಾವುದೇ ಹೊಂದಾಣಿಕೆ ಇಲ್ಲ. ಉಸ್ತುವಾರಿಗಾಗಿಯೂ ಕೂಡಾ ಕ್ರಮಕೈಗೊಳ್ಳಲಾಗುತ್ತಿದೆ. ಈ ಯೋಜನೆಯ ಶಂಕುಸ್ಥಾಪನೆಗೆ ಹಿರಿಯ ನಾಯಕರಾದ ಹಾಗೂ ರಾಜ್ಯಸಭೆ ವಿರೋಧಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರೆಸಲಾಗುವುದು ಎಂದರು.
ವಸತಿ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಹಲವಾರು ದೂರುಗಳು ಬಂದಿವೆ. ಕಾಳಗಿ ಹಾಗೂ ಶಹಾಬಾದ್ ತಾಲೂಕಿನ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ವಸತಿ ಯೋಜನೆಯಡಿಯಲ್ಲಿ ಎಂಪಿ, ಶಾಸಕರ ಹಾಗೂ ಎಂ ಎಲ್ ಸಿ ಅವರ ಶಿಫಾರಸ್ಸು ಇರುವುದಿಲ್ಲ. ಸರ್ಕಾರ ನಿಯಮಗಳ ಪ್ರಕಾರ ಅಂತಹ ಯಾವುದೇ ವ್ಯವಸ್ಥೆ ಇಲ್ಲ. ನಿಯಮಾನಸಾರು ಗ್ರಾಮಸಭೆ ನಡೆಸಿ ವಿಡಿಯೋ ರೆಕಾರ್ಡಿಂಗ್ ನಡೆಸಿ ಫಲಾನುಭವಿಗಳ ಆಯ್ಕೆ ಮಾಡಬೇಕು. ಯಾವುದೇ ಒತ್ತಡಗಳಿಗೆ ಬಗ್ಗಬಾರದು. ನಾನು ಯಾರ ಪರವಾಗಿ ಶಿಫಾರಸ್ಸು ಮಾಡಿಲ್ಲ, ಮಾಡುವುದೂ ಇಲ್ಲ. ಈ ಬಗ್ಗೆ ಯಾವುದೇ ದೂರು ಬಂದರೂ ಕೂಡಾ ಪಿಡಿಓಗಳನ್ನು ಸಸ್ಪೆಂಡ್ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ರಾಂಪುರ ಹಳ್ಳಿ, ಮೋಗಲಾ, ಲಾಡ್ಲಾಪುರ, ರಾವೂರು ಗ್ರಾಮಗಳಲ್ಲಿ ಸಮುದಾಯ ಭವನ, ಸ್ತ್ರೀ ಶಕ್ತಿ ಭವನ, ಮಹಿಳಾ ಒಕ್ಕೂಟ ಭವನ ನಿರ್ಮಾಣ ಕಾಮಗಾರಿಗೆ ನಿವೇಶನ ಲಭ್ಯವಿಲ್ಲದ ಬಗ್ಗೆ ಮಾಹಿತಿ ಪಡೆದ ಶಾಸಕರು ಹತ್ತು ದಿನಗಳಲ್ಲಿಯೇ ನಿವೇಶನ ಒದಗಿಸುವಂತೆ ಪಿಡಿಓಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಾಲೂಕಿನಲ್ಲಿ ಮತ್ತೆ ಅಕ್ರಮ ಮರಳು ಸಾಗಾಣಿಕೆ ತಲೆ ಎತ್ತಿದೆ. ಕಾಟಮದೇವರಹಳ್ಳಿಯಲ್ಲಿ ಮರುಳು ಸಾಗಾಣಿಕೆ ನಡೆಯುತ್ತಿದೆ. ಪೊಲೀಸ್, ಕಂದಾಯ ಇಲಾಖೆ ಹಾಗೂ ಪಿಡಿಓಗಳು ಕಟ್ಟುನಿಟ್ಟಿನ ಕರ್ತವ್ಯ ನಿಭಾಯಿಸುತ್ತಿಲ್ಲ. ಯಾರೇ ಆಗಲೀ, ಅಕ್ರಮ ಮರಳು ಸಂಗ್ರಹಕ್ಕೆ ಜಾಗ ಕೊಡುವುದಾಗಲಿ ಅಥವಾ ದಾರಿ ಕೊಟ್ಟರೂ ಅವರ ಜಮೀನಿನ ಮಾಲೀಕತ್ವವನ್ನು ರದ್ದುಗೊಳಿಸಿ. ಈ ಕುರಿತು ಚಿತ್ತಾಪುರ, ಕಾಳಗಿ ಹಾಗೂ ಶಹಾಬಾದ್ ತಹಸೀಲ್ದಾರ ಸುತ್ತೋಲೆ ಹೊರಡಿಸಬೇಕು ಎಂದು ಸೂಚಿಸಿದರು.
ಅಬಕಾರಿ ಇಲಾಖೆಯವರು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುತ್ತಿಲ್ಲ. ಒಂದು ಕಡೆಗೆ ಟಾರ್ಗೆಟ್ ನೀಡಲಾಗುತ್ತಿದೆ. ಮದ್ಯ ಮಾರಾಟಗಾರರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದಾಗ, ಅಬಕಾರಿ ಇಲಾಖೆ ಅಧಿಕಾರಿ ಮಾತನಾಡಿ, ಈ ಸಲದ ವಾರ್ಷಿಕ ಟಾರ್ಗೆಟ್ ರೂ 35,000 ಕೋಟಿ ಇದೆ ಎಂದು ಹೇಳಿದಾಗ ತೀವ್ರ ಅಚ್ಚರಿ ವ್ಯಕ್ತಪಡಿಸಿದ ಶಾಸಕರು ” ಸರ್ಕಾರಕ್ಕೇನು ಹುಚ್ಚು ಹಿಡಿದಿಯೇನ್ರೀ? ಜನರಿಗೆ ಕುಡಿಸೋದಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರಲ್ಲರೀ ” ಎಂದರು.

ಡಾಬಾಗಳು ರಾತ್ರಿ 1 ಗಂಟೆ, 2 ಗಂಟೆಯವರೆಗೆ ತೆರೆದಿರುತ್ತವೆ ಅವುಗಳು ಸರಿಯಾದ ಸಮಯಕ್ಕೆ ಬಂದ್ ಮಾಡಬೇಕು. ಕಂದಾಯ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದರು.
ಹಲಕಟ್ಟಾ ಗ್ರಾಮದಲ್ಲಿ ಜಮೀನುಗಳ ಸರ್ವೇ ಕಾರ್ಯ ಮುಗಿಸಬೇಕು ಎಂದು ಈಗಾಗಲೇ ಹಲವಾರು ಬಾರಿ ಸೂಚಿಸಲಾಗಿದೆ ಆದರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಎಡಿಎಲ್ ಆರ್ ಅವರಿಗೆ ತರಾಟೆಗೆ ತೆಗೆದುಕೊಂಡ ಶಾಸಕರು ಮೇ ತಿಂಗಳ ಒಳಗಾಗಿ ಸರ್ವೇ ಕಾರ್ಯ ಮುಗಿಯಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಆಗ ಪ್ರತಿಕ್ರಿಯಿಸಿದ ಅಧಿಕಾರಿ ಸರ್ವೇ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯಿಂದಾಗಿ ಸರ್ವೇ ಕಾರ್ಯ ಮಾಡಲಾಗಿಲ್ಲ ಎಂದು ಸಮಜಾಯಿಷಿ ನೀಡಿದರು.
ಪುರಸಭೆ ಅಧ್ಯಕ್ಷ ಮಲ್ಲಿಕಾರ್ಉನ ಕಾಳಗಿ, ತಹಶೀಲ್ದಾರ ಉಮಾಕಾಂತ ಹಳ್ಳೆ, ಶಹಬಾದ ತಹಶೀಲ್ದಾರ್ ಸುರೇಶ ವರ್ಮಾ, ಕಾಳಗಿ ತಹಶೀಲ್ದಾರ್ ನಾಗನಾಥ, ತಾಪಂ ಇಒ ನೀಲಗಂಗಾ ಬಬಲಾದ, ಶಹಬಾದ ಇಒ ಡಾ. ಬಸಲಿಂಗಪ್ಪ ಡಿಗ್ಗಿ, ಕಾಳಗಿ ಇಒ ಅಪೂರ್ವ ಕುಲಕರ್ಣಿ, ಸಿಪಿಐ ಪ್ರಾಕಾಶ ಯಾತನೂರ, ಅಧಿಕಾರಿಗಳಾದ ಅಣ್ಣೇಪ್ಪ ಕುದರಿ, ಸಿದ್ದವೀರಯ್ಯ ರುದ್ನೂರ, ಮನೋಜಕುಮಾರ ಗುರಿಕಾರ, ಮಲ್ಲಿನಾಥ, ಸಿದ್ದಣ್ಣ ಅಣಬಿ, ವಿಜಯಕುಮಾರ, ಸವಿತಾ, ಅಮರದೀಪ ಪವಾರ ಸೇರಿದಂತೆ ಪಿಡಿಒಗಳು ಇದ್ದರು.

ವರದಿ. ಬಸವರಾಜ್ ಹಿರೇಮಠ್, ಕಲಬುರಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
