ಪತ್ರ ನೀಡಲು ಒತ್ತಾಯಿಸಿ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕ ಸಂಘದಿಂದ ಪ್ರತಿಭಟನೆ.
ಸಿಂಧನೂರು : ತಾಲೂಕಿನ ಅಲಬನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಗುರ್ಕಿ ಗ್ರಾಮದ ಸರ್ವೆ ನಂ.140 ರಲ್ಲಿ ವಾಸಿಸುವ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು ಹಾಗೂ ಗ್ರಾಮಕ್ಕೆ ಸಮರ್ಪಕ ಮೂಲ ಸೌಕರ್ಯಗಳನ್ನು ಒದಗಿಸಬೆಕೆಂದು ಒತ್ತಾಯಿಸಿ ನಗರದ ತಾಲೂಕು ಪಂಚಾಯತ ಕಾರ್ಯಾಲಯದಲ್ಲಿ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ವತಿಯಿಂದ ತಾಲೂಕು ಇಓ ಮತ್ತು ತಹಸೀಲ್ದಾರಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕಿನ ಅಲಬನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳಗುರ್ಕಿ ಗ್ರಾಮದಲ್ಲಿ ಮೂಲ ಸೌಕರ್ಯಗಳಿಲ್ಲದೇ ದಿನವೂ ಜನರು ಯಾತನೆ ಅನುಭವಿಸುತ್ತಿದ್ದಾರೆ. ಚರಂಡಿ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ ,ಓಣಿಯ ದಾರಿಗಳು ಸಂಪೂರ್ಣ ಕೆಟ್ಟುಹೋಗಿವೆ, ಮಳೆ ಬಂದರಂತೂ ಕೆಸರುಮಯವಾಗುವುದರಿಂದ ಗ್ರಾಮದ ನಿವಾಸಿಗಳು ಸಲೀಸಾಗಿ ನಡೆದಾಡಲು ಆಗುವುದಿಲ್ಲ. ಸರಿಯಾದ ದಾರಿಯಿಲ್ಲದ ಕಾರಣ ಮಕ್ಕಳು, ಮುದುಕರು, ಮಹಿಳೆಯರು ಅದೆಷ್ಟೋ ಬಾರಿ ಬಿದ್ದು ಗಾಯಮಾಡಿಕೊಂಡಿರುವ ಘಟನೆಗಳು ನಡೆದುಹೋಗಿವೆ. ಗ್ರಾಮ ಪಂಚಾಯತಿಯವರು ಸಚ್ಛತೆ, ನೈರ್ಮಲ್ಯಕ್ಕೆ ಆದ್ಯತೆ ಕೊಡದ ಕಾರಣ ಗ್ರಾಮದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಸೊಳ್ಳೆಗಳ ಹಾವಳಿ ಮಿತಿಮೀರಿದ್ದು, ರಾತ್ರಿಯಾದರೆ ಸಾಕು ಜನರು ಮನೆಯ ಹೊರಗಡೆ ಕುಳಿತುಕೊಳ್ಳದಂತಾಗಿದೆ. ಇನ್ನು ಬಹಳಷ್ಟು ಜನರು ಜ್ವರ, ತಲೆನೋವು, ವಾಂತಿಭೇದಿ, ಹೊಟ್ಟೆನೋವು,ಮೈತಿರುಗುವುದು ಸೇರಿದಂತೆ ಇನ್ನಿತರೆ ಅನಾರೋಗ್ಯ ಸಮಸ್ಯೆಗಳಿಂದ ದಿನವೂ ಬಳಲುತ್ತಿದ್ದಾರೆ. ದುಡಿದ ಕೂಲಿಯಲ್ಲಿ ಅರ್ಧದಷ್ಟು ಹಣ ಆಸ್ಪತ್ರೆಗೆ ಖರ್ಚು ಮಾಡಿದ್ದಾರೆ. ಇದರಿಂದ ಬಹುತೇಕ ಕುಟುಂಬಗಳು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿವೆ. ಗ್ರಾಮದಲ್ಲಿನ ಅವ್ಯವಸ್ಥೆಯ ಕಾರಣ ಜನರು ಹೈರಾಣಾಗಿ ಹೋಗಿದ್ದಾರೆ. ಗ್ರಾಮಕ್ಕೆ ಮೂಲ ಸೌಕರ್ಯಗಳಾದ ಸುವ್ಯವಸ್ಥಿತ ಚರಂಡಿ ವ್ಯವಸ್ಥೆ, ಕುಡಿವ ನೀರು, ಸಿಸಿ ರಸ್ತೆ ನಿರ್ಮಾಣ, ನೈರ್ಮಲ್ಯ ವಾತಾವರಣ ಕಲ್ಪಿಸುವುದು ಸೇರಿದಂತೆ ಹತ್ತು ಹಲವು ಕೆಲಸ ಕಾರ್ಯಗಳಿಗೆ ಕಾಲ ಕಾಲಕ್ಕೆ ಸರ್ಕಾರದಿಂದ ಅನುದಾನ ಬಂದರೂ ಸಮರ್ಪಕವಾಗಿ ಬಳಕೆಯಾಗಿಲ್ಲ. ಕಾರ್ಯಯೋಜನೆಯಂತೆ ಕೆಲಸ ಮಾಡದ ಕಾರಣ ಅಲ್ಲಲ್ಲಿ ತೇಪೆ ಕೆಲಸಗಳು ನಡೆದಿದ್ದು, ಹಣ ದುರ್ಬಳಕೆಯಾಗಿರುವ ಶಂಕೆ ಇದೆ. ಇದರಿಂದ ಬೆಳಗುರ್ಕಿ ಗ್ರಾಮ ಸರ್ಕಾರದ ಸೌಕರ್ಯಗಳಿಂದ ವಂಚಿತವಾಗಿದ್ದು, ಜನರು ಪರಿತಪಿಸುವಂತಾಗಿದೆ. ಬೆಳಗುರ್ಕಿ ಗ್ರಾಮದ ಸರ್ವೆ ನಂ. 140ರಲ್ಲಿ ಕಳೆದ ಹಲವು ವರ್ಷಗಳಿಂದ ಬಹಳಷ್ಟು ಕುಟುಂಬಗಳು ವಾಸ ಮಾಡುತ್ತಿದ್ದರೂ ಇಲ್ಲಿಯವರೆಗೂ ಅವರಿಗೆ ಹಕ್ಕುಪತ್ರಗಳನ್ನು ನೀಡಿಲ್ಲ. ಇದರಿಂದ ನಿವಾಸಿಗಳು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಹಕ್ಕುಪತ್ರ ನೀಡುವಂತೆ ಹಲವು ಬಾರಿ ಮೌಖಿಕವಾಗಿ, ಮನವಿ ಪತ್ರ ನೀಡಿ ಒತ್ತಾಯಿಸಿದರೂ ಇಲ್ಲಿಯವರೆಗೂ ನಿರ್ಲಕ್ಷ್ಯ ಮಾಡುತ್ತ ಬರಲಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿಯಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ ಗಮನಹರಿಸದೆ ಇರುವುದರಿಂದ ಅರ್ಹರಿಗೆ ದಕ್ಕಬೇಕಾದ ಸರ್ಕಾರಿ ಸವಲತ್ತುಗಳು ದೊರೆಯದಂತಾಗಿದೆ. ಹಾಗಾಗಿ ಇಲ್ಲಿನ ನಿವಾಸಿಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ 15 ದಿನಗಳ ಒಳಗಾಗಿ ಹಕ್ಕುಪತ್ರ ನೀಡಬೇಕು ಮತ್ತು ಗ್ರಾಮಸ್ಥರ ಅನುಕೂಲಕ್ಕಾಗಿ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಜಿಲ್ಲಾ ಸಂಚಾಲಕ ನಾಗರಾಜ ಪೂಜಾರಿ ಆಗ್ರಹಿಸಿದರು.
ತಾಲೂಕಿನ ಅಲಬನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಗುರ್ಕಿ ಗ್ರಾಮದ ಸರ್ವೆ ನಂ.140ರಲ್ಲಿ ವಾಸ ಮಾಡುವ ನಿವಾಸಿಗಳಿಗೆ 15 ದಿನಗಳೊಳಗಾಗಿ ಹಕ್ಕುಪತ್ರಗಳನ್ನು ನೀಡಬೇಕು, ಬೆಳಗುರ್ಕಿ ಗ್ರಾಮಕ್ಕೆ ಶುದ್ಧ ಕುಡಿವ ನೀರು ಪೂರೈಕೆ, ದಲಿತ ಸಮುದಾಯ ವಾಸಿಸುವ ಕಡೆ ಸೇರಿದಂತೆ ಕೆಟ್ಟು ಹೋದ ರಸ್ತೆಗಳಲ್ಲಿ ಸಿಸಿ ರಸ್ತೆ, ಸುವ್ಯವಸ್ಥಿತ ಚರಂಡಿ ನಿರ್ಮಾಣ, ನೈರ್ಮಲ್ಯ ವಾತಾವರಣ ಕಾಪಾಡುವುದು ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು, ಬೆಳಗುರ್ಕಿ ಗ್ರಾಮದಲ್ಲಿ ದಲಿತರಿಗೆ ಅಂತ್ಯಕ್ರಿಯೆ ನೆರವೇರಿಸಲು ಇರುವ ಜಾಗದ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು,ಬೆಳಗುರ್ಕಿ ಗ್ರಾಮದಲ್ಲಿ ಮಹಿಳೆಯರಿಗಾಗಿ ಹೈಟೆಕ್ ಶೌಚಾಲಯ ನಿರ್ಮಿಸಬೇಕು, ಬೆಳಗುರ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಡಿವ ನೀರಿನ ವ್ಯವಸ್ಥೆ, ಸುವ್ಯವಸ್ಥಿತ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಎಂದು ಹಕ್ಕೊತ್ತಾಯಗಳನ್ನ ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಾಗರಾಜ ಪೂಜಾರಿ ಜಿಲ್ಲಾ ಸಂಚಾಲಕರು, ಮಹಾದೇವ ಅಮರಾಪುರ,
ಹುಸೇನಪ್ಪ, ಕರಿಯಮ್ಮ, ಯಮನಮ್ಮ,ಬಸವರಾಜ ಕೊಂಡೆ ಅಧ್ಯಕ್ಷರು ಭಗತ್ ಸಿಂಗ್ ಆಟೋ ಚಾಲಕರ ಸಂಘ, ರಾಘವೇಂದ್ರ ಉಪ್ಪಳ
ಶ್ರೀನಿವಾಸ ಬುಕ್ಕನಹಟ್ಟಿ, ಪರಶುರಾಮ,ಮೌನೇಶ, ದೊಡ್ಡ ಹುಸೇನಪ್ಪ, ಇನ್ನಿತರರಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
