ವಿಷಯ : ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಭಾರತ್ ಬಂದ್*
ಕೇಂದ್ರ ಸರ್ಕಾರದ ರೈತ ವಿರೋಧಿ ಮೂರು ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಇಂದು ಭಾರತ್ ಬಂದ್ ಗೆ ಕರೆ ನೀಡಿದ್ದು, ಬಳ್ಳಾರಿಯಲ್ಲೂ ಸಹ ಈ ಬಂದ್ ಗೆ ಬೆಂಬಲಿಸಿ ಬಳ್ಳಾರಿಯ ರಾಯಲ್ ಸರ್ಕಲ್ ನಲ್ಲಿ ರೈತ, ಕಾರ್ಮಿಕ ಸಂಘಟನೆಗಳು, ಎಡ ಪಕ್ಷಗಳು ಹಾಗೂ ವಿದ್ಯಾರ್ಥಿ, ಯುವಜನ , ಮಹಿಳಾ ಸಂಘಟನೆಗಳು ಸೇರಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು. ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಕಾರ್ಯಕರ್ತರು ಕ್ರಾಂತಿಕಾರಿ ಗೀತೆಗಳನ್ನು ಹಾಡಿದರು. ಬಳ್ಳಾರಿಯ ನಾಗರಿಕರು ಕೂಡ ಇಂದಿನ ಭಾರತ್ ಬಂದ್ ಗೆ ಬೆಂಬಲಿಸಿ ಮುಖ್ಯ ರಸ್ತೆಗಳಲ್ಲಿ ಅಂಗಡಿ ಮುಗ್ಗಟ್ಟು ಗಳನ್ನು ಮುಚ್ಚುವುದರ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ಈ ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐ (ಎಂ) ನ ರಾಜ್ಯ ಕಾರ್ಯದರ್ಶಿ ಗಳಾದ ಯು.ಬಸವರಾಜ್ ಮಾತನಾಡುತ್ತ ” ಕೇಂದ್ರ ಸರ್ಕಾರ ಮೂರು ರೈತ ವಿರೋಧಿ ಕರಾಳ ಕೃಷಿ ಕಾಯ್ದೆಗಳನ್ನು ತರುವುದರ ಮೂಲಕ ರೈತರ ಜೀವನವನ್ನು ಇನ್ನಷ್ಟು ದಿವಾಳಿ ಎಬ್ಬಿಸಲು ಹೊರಟಿದೆ ಅಲ್ಲದೆ ರೈತರ ಬದುಕನ್ನು ಕಾರ್ಪೊರೇಟ್ ಕಂಪೆನಿಗಳ ಹಿಡಿತಕ್ಕೆ ಸಿಲುಕಿಸಲು ಪ್ರಯತ್ನಿಸುತ್ತಿದೆ. ದೆಹಲಿಯ ಗಡಿ ಭಾಗಗಳಲ್ಲಿ ಕಳೆದ ಹತ್ತು ತಿಂಗಳಿನಿಂದ ಲಕ್ಷಾಂತರ ರೈತರು ಈ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಹೋರಾಟ ನಡೆಸುತ್ತಿದ್ದು, ಹೋರಾಟದಲ್ಲಿ ಸುಮಾರು 600 ಕ್ಕು ಹೆಚ್ಚು ರೈತರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರೂ ಕೂಡ ಕೇಂದ್ರ ಸರ್ಕಾರ ಮಾತ್ರ ಕಿಂಚಿತ್ತೂ ಕಾಳಜಿ ತೋರಿಸದೆ, ಕಾರ್ಪೊರೇಟ್ ಮನೆತನಗಳ ಹಿತಾಸಕ್ತಿಯನ್ನು ಕಾಪಾಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿ, ಇನ್ನಷ್ಟು ಒತ್ತಡವನ್ನು ಹಾಕಲು ಈ ಭಾರತ್ ಬಂದ್ ಮಾಡಲಾಗಿದೆ ಎಂದು ಹೇಳಿದರು.”
ನಂತರ , ಎಸ್. ಯು. ಸಿ. ಐ ( ಕಮ್ಯುನಿಸ್ಟ್ ) ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಕೆ. ಸೋಮಶೇಖರ್ ಮಾತನಾಡಿ ” ಕೋವಿಡ್ ನಿಂದ ಈಗಾಗಲೇ ಸಂಕಷ್ಟದಲ್ಲಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ಅಗತ್ಯ ವಸ್ತುಗಳ ಬೆಲೆಯೇರಿಕೆ ಮಾಡಿದೆ. ಶಿಕ್ಷಣ, ಆರೋಗ್ಯ ವನ್ನು ಸಂಪೂರ್ಣ ವ್ಯಾಪಾರೀಕರಣ ಮಾಡಿರುವುದಲ್ಲದೆ, ಜನಗಳ ದುಡ್ಡಿನ ಮೇಲೆ ಸ್ಥಾಪಿಸಲಾದ ಸಾರ್ವಜನಿಕ ಸಂಸ್ಥೆಗಳಾದ ರೈಲ್ವೇ, ವಿದ್ಯುತ್, ವಿಮಾನ ನಿಲ್ದಾಣ, ಎಲ್. ಐ.ಸಿ, ಬಿ.ಎಸ್.ಎನ್. ಎಲ್ ಗಳನ್ನೂ ಖಾಸಗೀಕರಣ ಮಾಡಲಾಗುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರ ಬಂಡವಾಳಶಾಹಿಗಳ ಏಜೆಂಟ್ ಪ ಆಗಿದ್ದು, ಅವರ ಹಿತಾಸಕ್ತಿಗಳಿಗಾಗಿ ಮಾತ್ರವೇ ಕಾಯ್ದೆಗಳನ್ನು ಹಿಂಪಡೆಯುತ್ತಿಲ್ಲ . ಇದು ರೈತ ವಿರೋಧಿ, ಜನ ವಿರೋಧಿ ಸರ್ಕಾರ ಎಂದು ಸುಸ್ಪಷ್ಟವಾಗುತ್ತಿದ್ದು, ಈ ಭ್ರಷ್ಟ ಬಂಡವಾಳಶಾಹಿ ಸರ್ಕಾರ ವಿರುದ್ಧ ಬಲಿಷ್ಠ ಹೋರಾಟ ಕಟ್ಟಲು ಇಡೀ ಜನತೆ ಮುಂದಾಗಬೇಕು ಎಂದು ಕರೆ ನೀಡಿದರು”.
ಈ ಸಂದರ್ಭದಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ಸಂಗನಕಲ್ಲು ಕೃಷ್ಣಪ್ಪ, ಲೇಪಾಕ್ಷಿ, ಹನುಮಂತಪ್ಪ ,ಎಡ ಪಕ್ಷಗಳಾದ ಎಸ್.ಯು.ಸಿ.ಐ ಕಮ್ಯುನಿಸ್ಟ್ ನ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ, ಸಿ.ಪಿ.ಐ ನ ಜಿಲ್ಲಾ ಕಾರ್ಯದರ್ಶಿ ನಾಗಭೂಷಣ್, ಕಾರ್ಮಿಕ ಸಂಘಟನೆ ಎಐಯುಟಿಯುಸಿ ನ ಎ.ದೇವದಾಸ್, ಸಿಐಟಿಯು ನ ಸತ್ಯಬಾಬು, ಎಐಟಿಯುಸಿಯ ಇಸ್ಮಾಯಿಲ್, ಜನವಾದಿ ಮಹಿಳಾ ಸಂಘಟನೆ ಯ ಚಂದ್ರಕುಮಾರಿ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಎ.ಐ.ಎಮ್.ಎಸ್.ಎಸ್ ನ ಎಮ್ ಎನ್ ಮಂಜುಳಾ, ಯುವಜನ ಸಂಘಟನೆ ಎಐಡಿವೈಓ ನ ಜಗದೀಶ್ ನೇಮಕಲ್, ಡಿವೈಎಫ್ಐ ಎರ್ರಿಸ್ವಾಮಿ, ಎಐವೈಎಫ್ ನ ಕಟ್ಟೆ ಬಸಪ್ಪ, ವಿದ್ಯಾರ್ಥಿ ಸಂಘಟನೆ ಎಐಡಿಎಸ್ಓ ನ ಜಿಲ್ಲಾ ಉಪಾಧ್ಯಕ್ಷರಾದ ಜೆ.ಸೌಮ್ಯ ಮತ್ತು ನೂರಾರು ನಾಗರಿಕರು, ಜನರು ಭಾಗವಹಿಸಿದ್ದರು..

ವರದಿ. ಎಂ. ಎಲ್. ವೆಂಕಟೇಶ್, ಬಳ್ಳಾರಿ ಉಪಸಂಪಾದಕರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
