ಹೃದಯದ ಭಾಷೆ ಮತ್ತು ಹೇರಿಕೆ ಮಾತೃಭಾಷೆ ಹೃದಯದ ಭಾಷೆ…!!!

ಹೃದಯದ ಭಾಷೆ ಮತ್ತು ಹೇರಿಕೆ
ಮಾತೃಭಾಷೆ ಹೃದಯದ ಭಾಷೆ. ನಮ್ಮ ಕನಸನ್ನು ಅರಳಿಸುವ ಭಾಷೆ, ಅದು ನಮ್ಮ ಮನದ, ಹೃದಯದ ಭಾಷೆ. ಬೆಳೆಯುತ್ತಾ ಹೋದಂತೆ ಮನುಷ್ಯ ಅದೆಷ್ಟೋ ಭಾಷೆಗಳನ್ನು ಕರಗತಗೊಳಿಸಬಲ್ಲ, ವ್ಯವಹಾರಿಕವಾಗಿ ಯಾವುದೇ ಭಾಷೆಯನ್ನು ಬಳಸಿಕೊಳ್ಳಬಲ್ಲ, ಆದರೆ ಮಾತೃಭಾಷೆ ಎಂಬುದು ಆತನ ಆಂತರ್ಯದ ಭಾಷೆಯಾಗಿರುತ್ತದೆ. ಮಾತೃಭಾಷೆ ಮೇಲಿನ ಪ್ರೀತಿ ಪ್ರತಿಯೊಬ್ಬರ ಮನದಲ್ಲೂ ಅಚ್ಚಳಿಯದೆ ಇರುತ್ತದೆ.
ಭಾರತ ಬಹುಭಾಷಾ, ವೈವಿಧ್ಯಮಯ ಸಂಸ್ಕೃತಿಯನ್ನು ಒಳಗೊಂಡು ವಿಶ್ವಮಟ್ಟದಲ್ಲಿ ಹೆಸರನ್ನು ಗಳಿಸಿಕೊಂಡಿದೆ. ಇದನ್ನು ಮರೆತಂತಿರುವ ಕೇಂದ್ರ ಸರ್ಕಾರ ಏಕ ದೇಶ, ಏಕ ಭಾಷೆ ಎಂಬ ಘೋಷವಾಕ್ಯದೊಂದಿಗೆ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರಿಕೆ ಮಾಡಲು ಹೊರಟಿರುವುದಾಕೆ ?
ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಹಿನ್ನೆಲೆ, ಇತಿಹಾಸ, ಸಂಸ್ಕಾರವಿದೆ. ಒಂದು ಭಾಷೆಯನ್ನು ನಾಶ ಮಾಡುವುದು ಎಂದರೆ ಒಂದು ಜನಾಂಗವನ್ನೇ ನಾಶ ಮಾಡಿದಂತೆ. ಇದು ರಾಷ್ಟ್ರಕ್ಕೆ ಮಾಡುವ ಬಹುದೊಡ್ಡ ಮೋಸ.
ಹಿಂದಿ ಭಾಷೆಯನ್ನು ಕಲಿಯುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಕಲಿಯಲೇಬೇಕೆಂದು ಒತ್ತಡ ಹೇರುವುದು ಸರಿಯಲ್ಲ. ಜ್ಞಾನ ಸಂಪಾದನೆಗೆ ಯಾವ ಭಾಷೆಯನ್ನು ಬೇಕಾದರೂ ಕಲಿಯಬಹುದು. ಆದರೆ, ಪ್ರಾದೇಶಿಕ ಭಾಷೆಗಳನ್ನು ಕೊಲ್ಲುವ ಪ್ರಯತ್ನಗಳನ್ನು ಎಂದಿಗೂ ನಡೆಸಬಾರದು. ಈಗಾಗಲೇ ಪ್ರಾದೇಶಿಕ ಭಾಷೆಗಳ ಮೇಲೆ ಇಂಗ್ಲಿಷ್‌ ನಡೆಸುತ್ತಿರುವ ಗದಾಪ್ರಹಾರವನ್ನೇ ತಡೆದುಕೊಳ್ಳಲಾಗುತ್ತಿಲ್ಲ. ಇಂತಹ ಸಂದರ್ಭದಲ್ಲೇ ಹಿಂದಿ ಭಾಷೆಯ ಪ್ರಹಾರ ನಡೆಸುವ ಕೇಂದ್ರದ ಕ್ರಮ ಸರಿಯಲ್ಲ.
ಭಾರತೀಯ ಸಂಸ್ಕೃತಿ, ಪರಂಪರೆಯ ಬಗ್ಗೆ ಉದ್ದುದ್ದ ಭಾಷಣ ಮಾಡುವ ಬಿಜೆಪಿ ನಾಯಕರು ಪ್ರಾದೇಶಿಕ ಭಾಷೆ, ಸಂಸ್ಕೃತಿಯನ್ನು ಮರೆಯುತ್ತಿರುವುದೇಕೆ? ಒಂದೊಂದು ರಾಜ್ಯದ ಭಾಷೆಯ ಹಿನ್ನೆಲೆ, ಇತಿಹಾಸವನ್ನು ತಿಳಿದುಕೊಂಡು ಅವುಗಳನ್ನು ಉಳಿಸಿದಾಗ ಮಾತ್ರ ಆ ನೆಲದ ಸಂಸ್ಕೃತಿ, ಪರಂಪರೆ ಉಳಿಯಲು ಸಾಧ್ಯ. ಆ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಬೇಕೇ ವಿನಃ ನೆಲದ ಭಾಷೆಯೊಂದಿಗೆ ಸಂಸ್ಕೃತಿಯನ್ನು ಸಮಾಧಿ ಮಾಡುವ ಪ್ರಾದೇಶಿಕ ಭಾಷಾ ವಿರೋಧಿ ನೀತಿಯನ್ನು ಸಹಿಸಲು ಸಾಧ್ಯವಿಲ್ಲ. ಎಲ್ಲಾ ಭಾಷೆಗಳನ್ನು ಕಲಿಯುವುದಕ್ಕೆ ಮುಕ್ತ ಸ್ವಾತಂತ್ರ್ಯವಿರಬೇಕು. ವಿವಿಧ ಭಾಷೆಗಳನ್ನು ಆಸೆಪಟ್ಟು ಕಲಿಯಬೇಕೇ ವಿನಃ ಒತ್ತಡ ಹಾಕಿ ಭಾಷೆ ಕಲಿಸುವುದಕ್ಕೆ ಸಾಧ್ಯವೂ ಇಲ್ಲ. ಅದರಿಂದ ಯಾವ ಪ್ರಯೋಜನವೂ ಇಲ್ಲ.

ಕೇಂದ್ರದಲ್ಲಿ ಅಧಿಕಾರ ಸೂತ್ರ ಹಿಡಿದಿರುವ ಸರ್ಕಾರ ಬಹುಭಾಷೆಯನ್ನೊಳಗೊಂಡು ಸಂಸ್ಕೃತಿಯ ವೈವಿಧ್ಯತೆ ತೊರಿಸಬೇಕು. ಅದರಲ್ಲಿ ಏಕತೆಯನ್ನು ಸಾಧಿಸಬೇಕು. ಭಾವನಾತ್ಮಕವಾಗಿ ಬೆದರಿಕೆ ಉಂಟು ಮಾಡುವ ಪ್ರಯತ್ನ ಎಂದಿಗೂ ಸಲ್ಲದು. ಹಿಂದಿ ಬಲವಂತ ಹೇರಿಕೆಯನ್ನು ಕೈಬಿಟ್ಟು ಪ್ರಾದೇಶಿಕ ಭಾಷೆಗಳನ್ನು ಗಟ್ಟಿಗೊಳಿಸುವ ಕಾರ್ಯ ಯೋಜನೆಯನ್ನು ರೂಪಿಸುವ ಕೆಲಸಕ್ಕೆ ಕೇಂದ್ರ ಮುಂದಾಗಬೇಕು.
: ಪ್ರಾದೇಶಿಕ ಭಾಷೆಗಳಿಗೆ ಶಕ್ತಿ ತುಂಬುವ ಕೆಲಸಗಳು ನಡೆದಾಗ ಆಯಾ ಭಾಷೆಯಲ್ಲಿ, ಆಯಾ ನೆಲದಲ್ಲಿ ವ್ಯವಹಾರ, ಉದ್ಯೋಗ ಸಂಪಾದಿಸಲು ಸಾಧ್ಯವಾಗುತ್ತದೆ. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಮಾತೃಭಾಷೆಯಲ್ಲೇ ಮಕ್ಕಳಿಗೆ ಶಿಕ್ಷಣ ದೊರಕಿಸಬೇಕು. ಮಾತೃಭಾಷೆಯಲ್ಲಿ ಶಿಕ್ಷಣ ಕಲಿತ ಮಕ್ಕಳಿಗೆ ಉದ್ಯೋಗವಕಾಶಗಳನ್ನು ಮುಕ್ತವಾಗಿ ತೆರೆದಿಟ್ಟು ಅವರನ್ನು ಸ್ವಾಭಿಮಾನಿಗಳಾಗಿ ಬದುಕನ್ನು ಕಟ್ಟಿಕೊಡುವುದಕ್ಕೆ ಯೋಜನೆ ರೂಪಿಸಬೇಕೇ ವಿನಃ ಅಧಿಕಾರದ ಮದದಲ್ಲಿ ಸ್ಥಳೀಯ ಭಾಷೆಗಳನ್ನು ನಾಶ ಮಾಡುವ ಕುತಂತ್ರ ಆಲೋಚನೆ ವ್ಯವಸ್ಥೆಗೆ ಮಾರಕವಾದದ್ದು.
ಹಿಂದಿಗಿಂತಲೂ ಪ್ರಾದೇಶಿಕ ಭಾಷೆಗಳು ಸ್ವಂತಿಕೆ ಮೆರೆಯುವ ಶಕ್ತಿಯನ್ನು ಹೊಂದಿವೆ. ಶಾಸ್ತ್ರೀಯ ಗುಣ, ಸಾಹಿತ್ಯ ಪರಂಪರೆಯೊಂದಿಗೆ ಶಬ್ಧ ಸಂಪತ್ತಿನ ಗಣಿಯಿಂದ ತುಂಬಿಕೊಂಡಿವೆ. ಹಿಂದಿಯೇ ಭಾರತದಲ್ಲಿ ಪ್ರಧಾನ ಭಾಷೆಯಾಗಬೇಕು ಎಂಬ ಕೇಂದ್ರ ಸರ್ಕಾರದ ವಾದ ಸರಿಯಲ್ಲ. ಪ್ರತಿಯೊಂದು ರಾಜ್ಯಕ್ಕೂ ಆ ನೆಲದ ಭಾಷೆಯೇ ಯಜಮಾನನಾಗಬೇಕು. ದೇಶೀಯ ಭಾಷೆ ಹೆಸರಿನಲ್ಲಿ ಪ್ರಾದೇಶಿಕ ಭಾಷೆಗಳ ಮೇಲೆ ಸವಾರಿ ಮಾಡುವುದು ಸರಿಯಲ್ಲ. ಪ್ರಾದೇಶಿಕ ಭಾಷೆಗಳ ಉತ್ತಮ ಬಾಂಧವ್ಯದೊಂದಿಗೆ ಸ್ನೇಹಮಯವಾಗಿ ಹಿಂದಿಯನ್ನು ಕಲಿಸಲಿ ಅದು ಸೌಹಾರ್ದದ ಸಂಕೇತವಾಗಿರುತ್ತದೆ. ಆದರೆ, ಏಕ ದೇಶ, ಏಕ ಭಾಷೆ ಎನ್ನುವುದು ಸರ್ವಾಧಿಕಾರಿ ಧೋರಣೆಯಾಗುತ್ತದೆ. ಇದು ಆರೋಗ್ಯಕರವಲ್ಲ.

ಅಂತರರಾಷ್ಟ್ರೀಯ ಮಾತೃ ಭಾಷಾ ದಿನ ಯುನೆಸ್ಕೋ ಆಯೋಜನೆಗೊಳಿಸುವ ದಿನವಾಗಿದ್ದು, ವಿಶ್ವವ್ಯಾಪಿಯಾಗಿ ಇದನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆ ಮತ್ತು ಬಹುಭಾಷಾ ಸಿದ್ಧಾಂತದ ಅರಿವನ್ನು ಉತ್ತೇಜಿಸಲು ಫೆಬ್ರವರಿ 21 ರಂದು ಈ ಆಚರಣೆ ನಡೆಯುತ್ತದೆ. ಇದನ್ನು ಮೊದಲು ನವೆಂಬರ್ 17, 1999 ರಂದು ಯುನೆಸ್ಕೋ ಘೋಷಿಸಿತು. ಇದನ್ನು ಔಪಚಾರಿಕವಾಗಿ 2008 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್‌ಜಿಎ) ಮಾನ್ಯಗೊಳಿಸಿತು.  “ಜನರು ಬಳಸುವ ಎಲ್ಲಾ ಭಾಷೆಗಳ ಸಂರಕ್ಷಣೆ ಮತ್ತು ರಕ್ಷಣೆಯನ್ನು ಉತ್ತೇಜಿಸಲು ವಿಶ್ವ ಮಾತೃ ಭಾಷಾ ದಿನವನ್ನು ಆಚರಿಸಬೇಕು” ಎಂದು ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿತು.ಅದರೆ ನಮ್ಮ ಕೇಂದ್ರ ಸರ್ಕಾರ ಅನಾವಶ್ಯಕ ಹೇರಿಕೆಯನ್ನ ಮತ್ತೆ ಮತ್ತೆ ತರುತ್ತಿದೆ. ಇದು ಬರೀ ಭಾಷೆಯ ಪ್ರಶ್ನೆ ಅಲ್ಲ ಸ್ವಾತಂತ್ರ್ಯದ ಪ್ರಶ್ನೆ.. ಭಾಷಾ ಸ್ವಾತಂತ್ರ್ಯದ ಪ್ರಶ್ನೆ ಎಚ್ಚರಿಕೆ!!

ಅಂಕಣ :- ಅಜಯ.ಚ
ಹೂವಿನ ಹಡಗಲಿ
ಹುಗಲೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend