ಕರಡಿದಾಳಿಯಿಂದ ನಾಲ್ವರಿಗೆ ಗಾಯ ಮಾರಮ್ಮನಹಳ್ಳಿ ಗ್ರಾಮದ ಬಳಿ ಬೀಡುಬಿಟ್ಟ ಅರಣ್ಯ ಸಿಬ್ಬಂದಿ
ಕೂಡ್ಲಿಗಿ :ತಾಲೂಕಿನ ಮಾರಮ್ಮನಹಳ್ಳಿ ಗ್ರಾಮದ ಹೊರವಲಯದಲ್ಲಿ ಜಮೀನಿಗೆ ಕೆಲಸಕ್ಕೆ ಹೋದವರು ಹಾಗೂ ಕುರಿಗಾಹಿಗಳು ಸೇರಿ ನಾಲ್ವರ ಮೇಲೆ ಕರಡಿಯೊಂದು ಮಂಗಳವಾರ ದಾಳಿ ನಡೆಸಿ ಗಾಯಗೊಳಿಸಿದೆ.
ಮಾರಮ್ಮನಹಳ್ಳಿ ಗ್ರಾಮದ ಗಂಗಣ್ಣ(50), ಹುರುಡಿಹಳ್ಳಿ ಗ್ರಾಮದ ಶಿವಕುಮಾರ್(35), ನುಂಕನಹಳ್ಳಿ ಗ್ರಾಮದ ಗಾದ್ರ್ರಿಯ್ಯ(25) ಹಾಗೂ ತಿಮ್ಮನಹಳ್ಳಿ ಗ್ರಾಮದ ರಾಜಣ್ಣ ಎಂಬುವವರು ಕರಡಿದಾಳಿಯಿಂದ ಗಾಯಗೊಂಡವರು.
ಆಹಾರ ಅರಸಿ ಕಾಡಿನಿಂದ ರೈತರ ಜಮೀನಿಗೆ ಕರಡಿ ಬಂದಿದ್ದ ಸಂದರ್ಭದಲ್ಲೇ ಮಾರಮ್ಮನಹಳ್ಳಿ ಗ್ರಾಮದ ಗಂಗಣ್ಣ ಎಂಬುವರು ಜೋಳದಹೊಲಕ್ಕೆ ಹೋಗಿದ್ದರಿಂದ ಕರಡಿ ದಾಳಿ ನಡೆಸಿದೆ. ಕರಡಿ ದಾಳಿ ಮಾಡುತ್ತಿದ್ದಂತೆ ಜೋರಾಗಿ ಕೂಗಿಕೊಂಡಿದ್ದರಿಂದ ಜಮೀನಿನ ಹತ್ತಿರವಿದ್ದ ಜನರು ಬಂದು ಕೇಕೆ ಹಾಕಿದ್ದಾರೆ. ಇದರಿಂದ ಭಯಗೊಂಡ ಕರಡಿ ಕಾಡಿನತ್ತ ಕಾಲ್ಕಿತ್ತಿದೆ. ಕಾಡಿಗೆ ಓಡುವ ಸಂದರ್ಭದಲ್ಲಿ ಕುರಿಗಾಹಿಗಳಾದ ಶಿವಕುಮಾರ್ ಮತ್ತು ಗಾದ್ರಯ್ಯ ಎನ್ನುವವರ ಮೇಲೂ ಕರಡಿ ದಾಳಿ ಮಾಡಿ ಕೈಕಾಲು ಮತ್ತು ತೊಡೆ ಭಾಗದಲ್ಲಿ ಪರಚಿದೆ. ಕರಡಿಯ ಅರ್ಭಟವನ್ನು ಕಂಡು ಜಮೀನಿನಲ್ಲಿದ್ದ ತಿಮ್ಮನಹಳ್ಳಿ ರಾಜಣ್ಣ ಎನ್ನುವವರು ಓಡುವ ಭರದಲ್ಲಿ ನೆಲಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಅಲ್ಲದೆ, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಾರಮ್ಮನಹಳ್ಳಿಯ ಬೋರಮ್ಮ ಸಹ ಓಡುವ ಭರದಲ್ಲಿ ಬಿದ್ದು ಗಾಯಮಾಡಿಕೊಂಡಿದ್ದಾರೆ.
ಕರಡಿ ದಾಳಿಯಿಂದ ಗಾಯಗೊಂಡಿರುವ ಗಂಗಣ್ಣ, ಶಿವಕುಮಾರ್, ಗಾದ್ರಯ್ಯ ಎನ್ನುವವರನ್ನು ಗುಡೇಕೋಟೆ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಕರಡಿ ದಾಳಿ ನಡೆಸಿದ ಮಾಹಿತಿ ತಿಳಿದ ಗುಡೇಕೋಟೆ ಕರಡಿಧಾಮದ ಆರ್‍ಎಫ್‍ಓ ರೇಣುಕಾ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕರಡಿಯನ್ನು ಅರಣ್ಯಕ್ಕೆ ಓಡಿಸಿದ್ದಾರೆ. ಮಾರಮ್ಮನಹಳ್ಳಿ ಬಳಿಗೆ ಮತ್ತೆ ಕರಡಿ ಬರಬಹುದೆಂದು ತಿಳಿದು ಅರಣ್ಯ ಸಿಬ್ಬಂದಿ ಗ್ರಾಮದಲ್ಲೇ ಬೀಡುಬಿಟ್ಟಿದ್ದಾರೆ ಎಂದು ಆರ್‍ಎಫ್‍ಓ ರೇಣುಕಾ ಮಾಹಿತಿ ನೀಡಿದರು…

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
