ಕರ್ಚೇಡು ಗ್ರಾಮದಲ್ಲಿ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ” ಕಾರ್ಯಕ್ರಮ
ಸಮಸ್ಯೆಗಳಿಗೆ ಶೀಘ್ರವೇ ಕ್ರಮಕೈಗೊಳ್ಳಲು ಸೂಚನೆ: ಡಿಸಿ ಪವನ್‍ಕುಮಾರ್ ಮಾಲಪಾಟಿ
ಬಳ್ಳಾರಿ,: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಿಮಿತ್ತ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಬಳ್ಳಾರಿ ತಾಲೂಕಿನ ಕರ್ಚೇಡು ಗ್ರಾಮದಲ್ಲಿ ಶನಿವಾರ ಗ್ರಾಮವಾಸ್ತವ್ಯ ನಡೆಸಿದರು.

ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಗ್ರಾಮದ ಪ್ರತಿ ಮನೆಗೂ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದರು ಮತ್ತು ಗ್ರಾಮದೆಲ್ಲೆಡೆ ಸಂಚರಿಸಿ ರಸ್ತೆಗಳು, ಚರಂಡಿ, ಸ್ವಚ್ಛತೆ ಹಾಗೂ ಇನ್ನೀತರ ಮೂಲಸೌಕರ್ಯ ವ್ಯವಸ್ಥೆಯನ್ನು ಪರಿಶೀಲಿಸಿದರು.
ಗ್ರಾಮದಲ್ಲಿ ಮುಖ್ಯವಾಗಿ ರಸ್ತೆ ಮತ್ತು ಚರಂಡಿಗಳ ಸಮಸ್ಯೆ ಇದ್ದು, ಶಾಸಕರ ಅನುದಾನ ಮತ್ತು ಇನ್ನಿತರೆ ಅನುದಾನದಲ್ಲಿ ರಸ್ತೆ ಹಾಗೂ ಚರಂಡಿ ಸಮಸ್ಯೆಗಳನ್ನು ಸರಿಪಡಿಸುವಂತೆ ಗ್ರಾಪಂ ಸದಸ್ಯರಿಗೆ ಮತ್ತು ಅಧಿಕಾರಿಗಳಿಗೆ ಅಗತ್ಯ ಸೂಚನೆಗಳು ನೀಡಿದ್ದು ಕಂಡುಬಂದಿತು.

ಕರ್ಚೇಡು ಗ್ರಾಮದ ಬಹುತೇಕ ಓಣಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಈ ಬಗ್ಗೆ ಜನರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಪ್ರಸ್ತುತ ರೂ.4ಲಕ್ಷ ವೆಚ್ಚದಲ್ಲಿ ಪೈಪ್ ಲೈನ್ ಆಳವಡಿಕೆ ಹಾಗೂ ನಲ್ಲಿ ಸಂಪರ್ಕ ಸೇರಿದಂತೆ ಇತರೆ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಸರ್ಕಾರಿ ಶಾಲೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅಲ್ಲಿನ ವಿದ್ಯಾರ್ಥಿಗಳಿಗೆ ಬಿಸಿಯೂಟ ಚೆನ್ನಾಗಿದೆಯೇ, ನಿಮಗೆ ಎಂತಹ ಊಟ ಬೇಕು, ಮೊಟ್ಟೆ ಕೊಡುತ್ತಾರೋ ಎಂದು ವಿಚಾರಿಸಿದರು. ವಿದ್ಯಾರ್ಥಿಗಳು ನಮ್ಮ ಶಾಲೆಗೆ ಮೈದಾನ ಬೇಕು ಎಂದು ಕೇಳಿದರು. ಶಾಲೆಯಲ್ಲಿನ ಸಮಸ್ಯೆಗಳ ಕುರಿತು ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರೊಂದಿಗೆ ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ ಅಂಗನವಾಡಿ ಮೇಲ್ಚಾವಣಿಯನ್ನು ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರಿ ಶಾಲೆಯ ಮಕ್ಕಳಿಗೆ ಆಟವಾಡಲು ಮೈದಾನ, ಸ್ಮಶಾನ ಭೂಮಿ ಅಭಿವೃದ್ಧಿ, ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಒಳ ಚರಂಡಿ ಇಲ್ಲದಿರುವುದು ಎಲ್ಲಾ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳೆದುರು ಪ್ರಸ್ತಾಪಿಸಿದರು. ಎಲ್ಲರ ಅಹವಾಲುಗಳನ್ನು ಸಮಾಧಾನದಿಂದ ಆಲಿಸಿದ ಡಿಸಿ ಮಾಲಪಾಟಿ ಅವರು ತಮ್ಮ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲಾಗುವುದು ಎಂದು ಜನರಿಗೆ ಅಶ್ವಾಸನೆ ನೀಡಿದರು.
ವೇದಿಕೆ ಕಾರ್ಯಕ್ರಮದಲ್ಲಿ ಇನಾಂ ರದ್ದು ಮಾಡಿದ ಹಕ್ಕು ಪತ್ರ, ಪಿಂಚಣಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿದರು. ತದನಂತರ ಗ್ರಾಮಸ್ಥರಿಂದ ಅಹವಾಲು ಸ್ವೀಕಾರ ಮಾಡಿದರು.
ಈ ಗ್ರಾಮವಾಸ್ತವ್ಯ ನಡೆಸುವುದಕ್ಕಿಂತ ವಾರದ ಮುಂಚೆಯೇ ಗ್ರಾಮಕ್ಕೆ ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಕಳುಹಿಸಿ ಪಿಂಚಣಿ, ಪಹಣಿ, ದಾಖಲೆಗಳ ತಿದ್ದುಪಡಿ, ಪಡಿತರ ಚೀಟಿ, ವೃದ್ಧ್ಯಾಪ ವೇತನ, ವಿಧವಾ ವೇತನ, ಅಂಗವಿಕಲರಿಗೆ ಪಿಂಚಣಿ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಬಗೆಹರಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನದ ನಿಮಿತ್ತ ವೇದಿಕೆ ಆವರಣದಲ್ಲಿ ಹಾಕಲಾಗಿದ್ದ ವಿವಿಧ ಇಲಾಖೆಯ ವಸ್ತು ಪ್ರದರ್ಶನ ಮಳಿಗೆಗಳು, ಜಾಗೃತಿ ಫಲಕಗಳು ಗಮನಸೆಳೆದವು.
ಗ್ರಾಮದಲ್ಲಿನ ಹಿರಿಯರಿಗೆ ರಕ್ತದೊತ್ತಡ, ಮಧುಮೇಹ ಮುಂತಾದ ಪರೀಕ್ಷೆ ಸೇರಿದಂತೆ ಕಣ್ಣಿನ ಪರೀಕ್ಷೆ ಕೈಗೊಳ್ಳಲಾಗಿತು. ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದವರಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ಶಿಫಾರಸ್ಸು ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಹೇಮಂತ್.ಎನ್, ಪ್ರೊಬೆಶಿನರಿ ಐಎಎಸ್ ಅಧಿಕಾರಿ ರೂಪಿಂತರ್ ಕೌರ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ತಹಶೀಲ್ದಾರ ವಿಶ್ವನಾಥ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೆಲುವಾದಿ ಗಿರಿಯಮ್ಮ, ಉಪಾಧ್ಯಕ್ಷೆ ರಾಜಮ್ಮ, ಗ್ರಾಪಂ ಪಿಡಿಒ ರಾಜಶೇಖರ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು…

ವರದಿ. ವಿರೇಶ್ ಸಿರಿಗುಪ್ಪ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
