ಅನಕ್ಷರಸ್ಥರನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಶಕ್ತಿ ಇರುವುದು ಅಕ್ಷರಭ್ಯಾಸಕ್ಕೆ ಮಾತ್ರ: ಜಿಲ್ಲಾಧಿಕಾರಿ ಆರ್.ಲತಾ
ಬೆಂಗಳೂರು ಗ್ರಾಮಾಂತರ,: ಅನಕ್ಷರಸ್ಥರನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಶಕ್ತಿ ಇರುವುದು ಅಕ್ಷರಭ್ಯಾಸಕ್ಕೆ ಮಾತ್ರ. ಪ್ರತಿಯೊಬ್ಬರೂ ಸಾಕ್ಷರತೆಯ ಮಹತ್ವ ಅರಿತು ಓದಲು ಬರೆಯಲು ಬಾರದ ಅನಕ್ಷರಸ್ಥರನ್ನು ವಿದ್ಯಾವಂತರಾಗುವುದಕ್ಕೆ ಪ್ರೇರಣೆ ನೀಡಿ, ಅಕ್ಷರಾಭ್ಯಾಸ ಮಾಡಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಲೋಕ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಆರ್.ಲತಾ ಆರ್.ಲತಾ ಅವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಜಿಲ್ಲಾ ಲೋಕ ಶಿಕ್ಷಣ ಸಮಿತಿಯ ವತಿಯಿಂದ ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಇಂದು ಏರ್ಪಡಿಸಲಾದ “57ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ” ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅವರು ಸಾಕ್ಷರತಾ ಧ್ವಜಾರೋಹಣ ನೆರವೇರಿಸಿ, ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವುದು ಪುಣ್ಯದ ಕೆಲಸ. ಅನಕ್ಷರತೆಯ ಕತ್ತಲೆಯಲ್ಲಿರುವ ಮುಗ್ದ ಜನರನ್ನು ಸಾಕ್ಷರತೆಯ ಮೂಲಕ ಬೆಳಕಿಗೆ ತರುವಂತ ಕೆಲಸವನ್ನು ಮಾಡಬೇಕು. ಇಂತಹ ಕೆಲಸವನ್ನು ಮಾಡುವಾಗ ಯಾವುದೇ ಪ್ರತಿಫಲಾಪೇಕ್ಷೆ ಮಾಡದೆ ದೇಶಸೇವೆ ಎಂದು ತಿಳಿಯಬೇಕು.
ಮಾತೃ ಇಲಾಖೆಯಾದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮುಖ್ಯ ಶಿಕ್ಷಕರು, ಸಿಆರ್‌ಪಿಗಳು, ಬಿಆರ್‌ಸಿಸಿ, ಬಿಇಒ, ಜಿಲ್ಲಾ ಡಯಟ್ ಮತ್ತು ಉಪ ನಿರ್ದೇಶಕರು ಆಡಳಿತ ಮುಂತಾದವರು ಇತರ ಸಹಭಾಗಿ ಇಲಾಖೆಗಳ ಸಹಕಾರದೊಂದಿಗೆ ಸಾಕ್ಷರತಾ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿ ಆಯ್ದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮ ಮತ್ತು ಜನವಸತಿ ಪ್ರದೇಶಗಳಲ್ಲಿ ಅನಕ್ಷರಸ್ಥರ ಸಮೀಕ್ಷೆ, ಬೋಧಕರ ನೇಮಕ, ಹತ್ತಿರದ ಶಾಲಾ ಕಟ್ಟಡದಲ್ಲಿಯೇ ಸೂಕ್ತ ಅವಧಿಯಲ್ಲಿ ಕಲಿಕಾ ಕೇಂದ್ರವನ್ನು ಸ್ಥಾಪಿಸಿ ತರಗತಿಗಳನ್ನು ನಡೆಸುವ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯನ್ನಾಗಿಸಲು ಪ್ರಯತ್ನಿಸುವಂತೆ ಕರೆ ನೀಡಿದರು.
ಒಂದು ದೇಶದ ಸಾಕ್ಷರತೆಯ ಪ್ರಮಾಣ ಆ ದೇಶದ ಶ್ರೀಮಂತಿಕೆಯನ್ನು ತೋರಿಸುತ್ತದೆ. “ಶಿಕ್ಷಣವು ಜಗತ್ತನ್ನು ಬದಲಾಯಿಸ ಬಹುದಾದಂತಹ ಪ್ರಬಲವಾದ ಅಸ್ತ್ರವಾಗಿದೆ, ಸಾಕ್ಷರತೆಯ ಅಗತ್ಯ, ಮಹತ್ವ, ಮತ್ತದರ ಪ್ರಯೋಜನಗಳನ್ನು ಸಾರಲು ಪ್ರತೀ ವರ್ಷ ಸೆಪ್ಟಂಬರ್ 08 ರಂದು ವಿಶ್ವಾದ್ಯಂತ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸುತ್ತಾ ಬರಲಾಗಿದೆ. ಈ ಮೂಲಕ ಪ್ರತೀ ವ್ಯಕ್ತಿ, ಸಮುದಾಯ ಮತ್ತು ಸಮಾಜಕ್ಕೆ ಸಾಕ್ಷರತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತ ಬರಲಾಗುತ್ತಿದೆ ಎಂದರು.
ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯು ಓದಲು ಹಾಗೂ ಬರೆಯಲು ತಿಳಿದಿರಬೇಕು ಎನ್ನುವುದೇ ವಿಶ್ವ ಸಾಕ್ಷರತಾ ದಿನದ ಆಶಯ. ಇಂದಿಗೂ ಶಿಕ್ಷಣ ಕ್ಷೇತ್ರ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಸದ್ಯ ಸಾಕ್ಷರತೆಯ ನಿರೂಪಣೆಯೂ ಬದಲಾಗಿದೆ. ಕೊರೊನಾ ಶಿಕ್ಷಣ ಕ್ಷೇತ್ರದ ಮೇಲೆ ಭಾರೀ ಪರಿಣಾಮವನ್ನುಂಟು ಮಾಡಿದೆ ಹಾಗೂ ಭಾರತವು ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕೆ ಒತ್ತು ಕೊಟ್ಟರೂ ಇನ್ನೂ ಗ್ರಾಮೀಣ ಭಾಗಗಳಲ್ಲಿ ಹಲವಾರು ಕಾರಣಗಳಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಬಡತನ, ಮಾಹಿತಿಯ ಕೊರತೆ, ಸಮಾನತೆ ಮೊದಲಾದ ಕಾರಣಗಳಿಂದಾಗಿ ಮಕ್ಕಳು ಶಿಕ್ಷಣದಿಂದ ದೂರವುಳಿಯುವಂತಾಗಿದೆ, ಇನ್ನು ವಯಸ್ಕ ಅನಕ್ಷರಸ್ಥರ ಸಂಖ್ಯೆ ಗಣನೀಯವಾಗಿಯೇ ಎಂದು ತಿಳಿಸಿದರು.

ಹೆಣ್ಣುಮಗಳು ಶಿಕ್ಷಣ ಕಲಿತರೆ ಮನೆ ವಾತಾವರಣ ಸುಭೀಕ್ಷವಾಗಿರುತ್ತದೆ. ಈ ನಿಟ್ಟಿನಲ್ಲಿ ವಿದ್ಯೆ ಕಲಿಯದವರು, ಶಿಕ್ಷಣದಿಂದ ವಂಚಿತರಾದವರು ಕಲಿಯುವ ಮನಸ್ಸು ಮಾಡಬೇಕು. ಸಾಕ್ಷರತಾ ಪ್ರೇರಕರೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಸಾಕ್ಷರತೆಗೆ ಶ್ರಮಿಸಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತಂದು ಶಿಕ್ಷಣ ನೀಡಿದಲ್ಲಿ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಸುತ್ತಲಿನ ಪ್ರದೇಶಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸವಾಗಬೇಕು. ಅಂತಹ ಮಕ್ಕಳನ್ನು ಗುರುತಿಸಿ ಮುಖ್ಯವಾಹಿನಿಗೆ ತರಲು ಶ್ರಮಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಸಾಕ್ಷರತೆಯನ್ನು ಉತ್ತೇಜಿಸಲು ಹಾಗೂ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಜನರಿಗೆ ತಮ್ಮ ಹಕ್ಕುಗಳನ್ನು ತಿಳಿಸಲು ವಿಶ್ವ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ ಸಾಕ್ಷರತಾ ದಿನದ ಆಚರಣೆಯು ಜನರನ್ನು ನಿರಂತರ ಶಿಕ್ಷಣ ಪಡೆಯಲು ಪ್ರೋತ್ಸಾಹಿಸುವುದೇ ಆಚರಣೆಯ ಉದ್ದೇಶ ಎಂದರಲ್ಲದೇ ಸಮುದಾಯ ಗ್ರಂಥಾಲಯಗಳನ್ನು ನಿರ್ಮಿಸಿ,
ವಯಸ್ಕರು, ವಿಶೇಷ ಮಕ್ಕಳಿಗೆ ಶಿಕ್ಷಣ ನೀಡುವುದು, ಡಿಜಿಟಲ್ ಅಥವಾ ಸಾಮಾಜಿಕ ಜಾಲತಾಣಗಳ ಅರಿವಿಲ್ಲದವರಿಗೆ ಡಿಜಿಟಲ್ ಸಾಕ್ಷರತಾ ಕಾರ್ಯಾಗಾರ ಏರ್ಪಡಿಸುವುದು, ಜನರಿಗೆ ಜಾಗೃತಿ ಮೂಡಿಸಲು ಸಾಕ್ಷರತೆಯ ಕೌಶಲಗಳನ್ನು ಬಳಸುವುದು, ಪುಸ್ತಕಗಳನ್ನು ಸಂಗ್ರಹಿಸಿ ಅಗತ್ಯವಿದ್ದವರಿಗೆ ನೀಡಬಹುದು, ಅಗತ್ಯವಿದ್ದವರಿಗೆ ಓದಲು ಹಾಗೂ ಬರೆಯಲು ಕಲಿಸಬಹುದು, ಸಾಕ್ಷರತಾ ಚಾರಿಟಿಗೆ ದಾನ ನೀಡಬಹುದು, ಸಾಕ್ಷರತಾ ಸಂಸ್ಥೆಗಳೊಂದಿಗೆ ಕೈಜೋಡಿಸುವ ಮೂಲಕ ಶಿಕ್ಷಣ ಇಲಾಖೆಯವರು ಗ್ರಾಮೀಣ ಪ್ರದೇಶಗಳ ಜನರಿಗೆ ಸಾಕ್ಷರತೆಯ ಮಹತ್ವವನ್ನು ತಿಳಿ ಹೇಳಬೇಕು ಎಂದರು.
2022ರ ವಿಶ್ವ ಸಾಕ್ಷರತಾ ದಿನದ ಧ್ಯೇಯದ ಅನ್ವಯ “ಸಾಕ್ಷರತೆಯ ಕಲಿಕಾ ಸ್ಥಳಗಳನ್ನು ಪರಿವರ್ತಿಸಿ” ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಗು ತ್ತಿದೆ, ಸಮಾನ ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ನಿರ್ಧರಿಸಿದೆ ಹಾಗೂ ಈ ವಿಶ್ವ ಸಾಕ್ಷರತಾ ದಿನವನ್ನು ಆಚರಿಸುವ ಪರಿಣಾಮವಾಗಿ, ಜನರು ವ್ಯಕ್ತಿಗಳಾಗಿ ಮತ್ತು ಸಮಾಜವಾಗಿ ತಮ್ಮ ಹಕ್ಕುಗಳ ಬಗ್ಗೆ ಹೆಚ್ಚು ಜಾಗೃತರಾಗುತ್ತಾರೆ, ಇತ್ತೀಚಿನ ದಿನಗಳಲ್ಲಿ ಸಾಕ್ಷರತೆ ಬದುಕಲು ಆಹಾರದಷ್ಟೇ ಅವಶ್ಯಕ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ, ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಶ್ರೀಕಂಠ, ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿಗಳಾದ ರಮೇಶ್‌ರೆಡ್ಡಿ, ಜಿಲ್ಲಾ ಸಮಗ್ರ ಶಿಕ್ಷಣ ಉಪ ಯೋಜನಾ ಸಮನ್ವಯಾಧಿಕಾರಿ ಮಹಾದೇವ್, ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಧರ್ಮಶೆಟ್ಟಿ, ವಿಷಯ ಪರಿವೀಕ್ಷಕರಾದ ಶ್ರೀನಿವಾಸ್, ವಿಶ್ವನಾಥಪುರ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯ ವೆಂಕಟೇಶ್ ಮತ್ತಿತ್ತರರು ಭಾಗವಹಿಸಿದ್ದರು.
ವಿಶ್ವನಾಥಪುರ ಕರ್ನಾಟಕ ಪಬ್ಲಿಕ್ ಶಾಲೆಯ ಶಾಲಾ ಮಕ್ಕಳು ಬ್ಯಾಂಡ್‌ಸೆಟ್ ನುಡಿಸಿದರು. ದೈಹಿಕ ಶಿಕ್ಷಕರಾದ ಡಾ. ಜಿ.ರಮೇಶ್ ಧ್ವಜಾರೋಹಣ ಶಿಷ್ಟಾಚಾರ ನಡೆಸಿಕೊಟ್ಟರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಹನುಮಂತಪ್ಪ ಅವರು ಗಣ್ಯರನ್ನು ಸ್ವಾಗತಿಸಿ, ಪ್ರಸ್ತಾವಿಕ ನುಡಿ ನುಡಿದರು. ಕಾರ್ಯಕ್ರಮ ಸಹಾಯಕಿ ಪುಷ್ಪತಲಾ ಅವರು ಸಾಕ್ಷರತಾ ಪ್ರಮಾಣವಚನ ಬೋಧಿಸಿದರು. ಕಲಾವಿದರಾದ ವೆಂಕಟಸ್ವಾಮಿ ಅವರು ಸಾಕ್ಷರತಾ ಜಾಗೃತಿ ಗೀತೆಗಳನ್ನು ಹಾಡಿದರು…

ವರದಿ. ಕಲಾವತಿ. ಎನ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
