ರಾಜ್ಯಸಭೆಯ ವಿರೋಧಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಕಲಬುರಗಿ ನಗರಕ್ಕೆ ಆಗಮಿಸಿದ ನಮ್ಮ ತಂದೆಯವರಾದ
ಶ್ರೀ ಮಲ್ಲಿಕಾರ್ಜುನ ಖರ್ಗೆಯವರನ್ನು ಜಿಲ್ಲೆಯ ಜನತೆ ಅಭೂತಪೂರ್ವವಾಗಿ ಬರಮಾಡಿಕೊಂಡರು…..!
ಕಲಬುರಗಿಯ ಜನತೆ ನಮ್ಮ ತಂದೆಯವರ ಮೇಲಿಟ್ಟಿರುವ ಪ್ರೀತಿ ಹಾಗೂ ಅಭಿಮಾನಕ್ಕೆ ನಮ್ಮ ಇಡೀ ಕುಟುಂಬ ಸದಾ ಚಿರಋಣಿಯಾಗಿದೆ.
ನಗರದ ಜೈ ಭವಾನಿ ಫಂಕ್ಷನ್ ಹಾಲ್‌ನಲ್ಲಿ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಂದ ಅಭಿಮಾನದ ಸನ್ಮಾನ ಸ್ವೀಕರಿಸಿ ಮಲ್ಲಿಕಾರ್ಜುನ ಖರ್ಗೆಯವರು ನೆರೆದಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದರು. ಅವರ ಭಾಷಣದ ಸಂಕ್ಷಿಪ್ತ ರೂಪವನ್ನು ನಿಮ್ಮ ಮುಂದಿಡುತ್ತಿದ್ದೇನೆ.
“ನಾನು ಜನರ ಹತ್ತಿರದಲ್ಲೇ ಇದ್ದು 5 ದಶಕಗಳ ಕಾಲ ಜನಸೇವೆ ಮಾಡಿಕೊಂಡಿದ್ದು, ಜನರಿಂದ ದೂರವಿದ್ದು ಜೀವನ ನಡೆಸುವುದು ಅಸಾಧ್ಯ. ಆದರೆ, ಕೋವಿಡ್ ಸಾಂಕ್ರಾಮಿಕದಿಂದಾಗಿ ನಾನು ಕಳೆದ ಒಂದು ವರ್ಷ ನಾಲ್ಕು ತಿಂಗಳಿನಿಂದ ಕಲಬುರಗಿಯ ಪುಣ್ಯಭೂಮಿಗೆ ಇಷ್ಟು ದಿನ ನಾನು ಬರಲಾಗಲಿಲ್ಲ. ದೇಶದ ಇಬ್ಬರು ಮಹಾನ್ ನಾಯಕರಾದ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ತಮ್ಮನ್ನೆಲ್ಲಾ ನೋಡುವ ಭಾಗ್ಯ ಒದಗಿಬಂದಿದ್ದು ಖುಷಿ ನೀಡಿದೆ.
ನನ್ನನ್ನು 11 ಸಲ ಜನ ಜಯಿಸಿ ಕಳಿಸಿದ್ದೀರಿ. ಯಾವುದೋ ಕಾರಣದಿಂದ ನಾನು ಈ ಸಲ ಸೋತೆ. ನನ್ನ ಸೋಲಿಗೆ ಕಲಬುರಗಿಯ ಜನ ಕಾರಣರಲ್ಲ. ಬದಲಿಗೆ ಮೋದಿ, ಶಾ ಹಾಗೂ RSS ನವರು ಕುತಂತ್ರ ಮಾಡಿ ನನ್ನನ್ನು ಸೋಲಿಸಿದರು.
ಸಂಸತ್ತಿನಲ್ಲೇ ಮೋದಿ ಬಹಿರಂಗವಾಗಿ ನನ್ನ ಸೋಲಿನ ಬಗ್ಗೆ ಹೇಳಿದ್ದರು. ಆದರೆ, ಆಗ ಅವರ ಕುತಂತ್ರವನ್ನು ಅರಿಯಲು ನಾವು ವಿಫಲರಾದೆವು.
ದೀನ – ದಲಿತರ ಒಗ್ಗಟ್ಟನ್ನು ಬಿಜೆಪಿ ಸಹಿಸುವುದಿಲ್ಲ. ಮೋದಿಯವರು ದಲಿತರಿಗೆ ಹಾಗೂ ಹಿಂದುಳಿದ ಸಮುದಾಯದ ಎಷ್ಟು ಜನರಿಗೆ ಅಧಿಕಾರ ಕೊಟ್ಟಿದ್ದಾರೆ? ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಎಲ್ಲಾ ಜನಾಂಗದ ನಾಯಕರಿಗೆ ಮಹತ್ವದ ಖಾತೆ ಕೊಡಲಾಗಿತ್ತು. ಕಾಂಗ್ರೆಸ್ ಪಕ್ಷವು ಯಾವಾಗಲೂ ಸಾಮಾಜಿಕ ನ್ಯಾಯದ ಪರವಾಗಿದೆ.
ಆರ್ಟಿಕಲ್ 371J ಮೂಲಕ ಕಾಂಗ್ರೆಸ್ ಪಕ್ಷವು ಈ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಿದೆ. ಆದರೆ, ಬಿಜೆಪಿ ಏನು ಮಾಡಿದೆ?.
ನಮ್ಮ ಕಾಲದಲ್ಲಿ ಜಾರಿಗೆ ತಂದ ಯೋಜನೆಗಳಿಗೆ ತಡೆಹಿಡಿದಿದ್ದು, ಇಲ್ಲವೇ ಹೆಸರು ಬದಲಾಯಿಸಿದ್ದೇ ಮೋದಿ ಸಾಧನೆ. ಪೆಟ್ರೋಲ್ ಡಿಸೇಲ್, ಅಡುಗೆ ಅನಿಲ ಬೆಲೆ ಗಗನಕ್ಕೇರಿದೆ. ಇದು ಬಿಜೆಪಿ ಹಾಗೂ ಮೋದಿಯವರ ಸಾಧನೆ. ಬೆಲೆಗಳ ಹೆಚ್ಚಳ ಮಾಡಿರುವ ಮೋದಿ ಸರ್ಕಾರಕ್ಕೆ ಏಳು ವರ್ಷದಲ್ಲಿ 25 ಲಕ್ಷ ಕೋಟಿ ಲಾಭವಾಗಿದೆ.
ಬಿಜೆಪಿ ಸರ್ಕಾರದ ಜನವಿರೋಧಿ ಧೋರಣೆ ಅನುಸರಿಸುತ್ತಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಮೋದಿ ಹೇಳಿದ ಸುಳ್ಳಗಳನ್ನೇ ಸತ್ಯ ಎಂದು ಬಿಂಬಿಸಿ ಹರಿದಾಡಿಸಲಾಗುತ್ತದೆ. ನಾನು ಸಚಿವನಾಗಿದ್ದಾಗ ರೈಲ್ವೆಯಲ್ಲಿ 14.50 ಲಕ್ಷ ನೌಕರರು ಕೆಲಸ ಮಾಡುತ್ತಿದ್ದರು. ಈಗ ಅದು 12.76 ಲಕ್ಷಕ್ಕೆ ಇಳಿದಿದೆ. ನಾಲ್ಕು ಇನ್ಶೂರನ್ಸ್ ಕಂಪನಿಗಳಿಗೆ ಹೊಸ ಕಾನೂನು ತಂದು ತೊಂದರೆ ಕೊಡಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ ಟೆಲಿಫೋನ್, ಬ್ಯಾಂಕ್, ಇನ್ಶೂರೆನ್ಸ್, ರೈಲ್ವೆ, ಬಿಇಎಲ್ ಕಂಪನಿಗಳಲ್ಲಿ ಸುಮಾರು ಮೂರು ಕೋಟಿ ಉದ್ಯೋಗ ಕಡಿತಗೊಳಿಸಲಾಗಿದೆ. ಇದನ್ನು ಸರ್ಕಾರವೇ ವ್ಯವಸ್ಥಿತವಾಗಿ ಮಾಡುತ್ತಿದೆ.
ಕಾಂಗ್ರೆಸ್ ಸರ್ಕಾರವು ಭೂ ಸುಧಾರಣ ಕಾಯಿದೆ ತಂದು ಉಳುವವನೇ ಒಡೆಯ ಎಂದು ಭೂಮಿ ಇಲ್ಲದವರಿಗೆ ಭೂಮಿ ನೀಡಿತ್ತು. ಆದರೆ ಈಗ ಮೋದಿ ಅವರು ಯಾರು ಬೇಕಾದರೂ ಎಷ್ಟು ಬೇಕಾದರೂ ಭೂಮಿ ಖರೀದಿ ಮಾಡಲು ಅನುಕೂಲ ಮಾಡಿಕೊಟ್ಟರು. ಶ್ರೀಮಂತರಿಗೆ ಹೆಚ್ಚು ಹೆಚ್ಚು ಭೂಮಿ ತೆಗೆದುಕೊಳ್ಳಲು ಅನುಮತಿಕೊಟ್ಟರು. ಇದರಿಂದಾಗಿ ಬಡವರು ಭೂಮಿ ಕಳೆದುಕೊಂಡು ಬಡವರಾದರು. ಮೋದಿ ಅವರ ಈ ನೀತಿಗಳಿಂದಾಗಿ ಜನಸಾಮಾನ್ಯರು ಹಾಗೂ ರೈತರು ತೀವ್ರ ತೊಂದರೆಗೊಳಗಾಗಿದ್ದಾರೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲ ಧರ್ಮದ ಜಾತಿಯ ಜನರು ಜೀವಿಸಬೇಕು. ಆದರೆ RSS ಸಿದ್ದಾಂತ ಇದಕ್ಕೆಲ್ಲ ಅವಕಾಶ ನೀಡುವುದಿಲ್ಲ. ಇದನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕು. ಬುದ್ದ-ಬಸವ-ಅಂಬೇಡ್ಕರ್ ಅವರ ತತ್ವ ಸಿದ್ದಾಂತಕ್ಕೆ ಬಿಜೆಪಿಯ ವಿರೋಧ ನೀತಿಗಳ ಬಗ್ಗೆ ಜನ ಜಾಗೃತರಾಗಿರಬೇಕು.
ಸಾರ್ವಜನಿಕ ಇಲಾಖೆ, ಸಹಕಾರಿ ಸಂಘಗಳ ಸ್ಥಾಪನೆ, ಖಾಸಗಿ ವಲಯ, ಮೈಕ್ರೋ ಇಂಡಸ್ಟ್ರೀ ಹಾಗೂ ಮೈಕ್ರೋ ಎಕಾನಮಿ ಜವಾಹರಲಾಲ್ ನೆಹರು ಅವರ ಸಾಧನೆಯಾಗಿತ್ತು. ಆದರೆ, ಈಗಿನ ಪ್ರಧಾನಿಗಳು ಸಾರ್ವಜನಿಕ ವಲಯವನ್ನು ಖಾಸಗಿಯವರ ಪಾಲು ಮಾಡುತ್ತಿದ್ದಾರೆ.
ಇಂದು ದೇಶದಲ್ಲಿ ಮುಕ್ತವಾದ ಸ್ವಾತಂತ್ರ್ಯ ಯಾರಿಗಿದೆ? ಪತ್ರಿಕೆಯವರ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗಿದೆ. ಪೆಗಾಸಸ್ ನಂತಹ ಸಂಸ್ಥೆಯಿಂದ ಗೂಢಚರ್ಯೆ ನಡೆಸಲಾಗುತ್ತಿದೆ. ಅದರಲ್ಲಿ ಪತ್ರಿಕೆಯವರು, ರಾಜಕಾರಣಿಗಳು, ಅಧಿಕಾರಿಗಳು, ನ್ಯಾಯಾಧೀಶರೂ ಸಹ ಗೂಢಚರ್ಯೆಗೆ ಒಳಗಾಗಿದ್ದಾರೆ.
ರಾಜ್ಯಸಭೆ ಸದಸ್ಯತ್ವ ಮುಗಿದ ನಂತರ ನೀವು ನಿವೃತ್ತರಾಗುತ್ತೀರಲ್ಲ ಎಂದು ಯಾರೋ ಒಬ್ಬರು ಕೇಳುತ್ತಿದ್ದರು. ನಾನು ಹೇಳೋದೇನೆಂದರೆ, ನಾನು ನನ್ನ ಕೊನೆಯ ಉಸಿರು ಇರುವವರೆಗೆ ಪಲಾಯನ ಮಾಡದೆ, ಜನರ ಸೇವೆಯೇ ಮಾಡುತ್ತೇನೆ. ಅದಕ್ಕೆ ರಾಜಕೀಯ ಅಧಿಕಾರದ ಅವಶ್ಯಕತೆ ಇಲ್ಲ.
ತತ್ವಸಿದ್ದಾಂತದ ಮೇಲೆ ನಾನು ರಾಜಕಾರಣ ಮಾಡುತ್ತೇನೆ. ಕೊನೆಯ ಉಸಿರು ಇರುವವರೆಗೆ ನಾನು ಜನರ ಪರ ಹೋರಾಡುತ್ತಲೇ ಇರುತ್ತೇನೆ. ನಿವೃತ್ತಿಯಾಗುವ ಮಾತೇ ಇಲ್ಲ”..

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
