ಕೂಡ್ಲಿಗಿಃ ಗಾಂಧೀಜಿ ಚಿತಾಭಸ್ಮ ಸ್ಮಾರಕ ಆವರಣದಲ್ಲಿಚಿಂತನ ಚೇತನ ಕಾರ್ಯಕ್ರಮ
ಕೂಡ್ಲಿಗಿ ತಾಲೂಕು ವೈವಿಧ್ಯತೆಯ ಐತಿಹಾಸಿಕ ತಾಣಗಳ ತವರು – ಭೀಮಣ್ಣ ಗಜಾಪುರ.
ಕೂಡ್ಲಿಗಿಃ ಕೂಡ್ಲಿಗಿ ತಾಲೂಕು ಬರದ ನಾಡಾಗಿದ್ದರು ಐತಿಹಾಸಿಕ, ಪರಿಸರ ಪ್ರಜ್ಞೆ ಸಾಮಾಜಿಕ ಕಳಕಳಿ, ಸಾಹಿತ್ಯ ಕ್ಷೇತ್ರ, ರಂಗಭೂಮಿ ಕಲೆ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಹೃದಯ ಶ್ರೀಮಂತಿಕೆ ಹೊಂದಿದ ನೆಲೆಬೀಡು ಎಂದು ಕೂಡ್ಲಿಗಿ ತಾಲೂಕಿನ ಸಾಹಿತಿ ಹಾಗೂ ಪತ್ರಕರ್ತ ಭೀಮಣ್ಣ ಗಜಾಪುರ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದ ಮಹಾತ್ಮಾ ಗಾಂಧೀಜಿಯವರ ಪವಿತ್ರ ಚಿತಾಭಸ್ಮದ ಹುತಾತ್ಮರ ಸ್ಮಾರಕ ಆವರಣದಲ್ಲಿ ಕೂಡ್ಲಿಗಿ ಗಾಂಧೀಜಿ ಸ್ಮಾರಕ ಸಮಿತಿ, ಮೈದಾನ ಗೆಳೆಯರ ಬಳಗ ಮತ್ತು ಜೆಸಿಐ ಕೂಡ್ಲಿಗಿ ಗೋಲ್ಡನ್ ಪದಾಧಿಕಾರಿಗಳು ಪ್ರತಿ ಬುಧವಾರ ಆಯೋಜಿಸುವ ಚಿಂತನ – ಚೇತನ ಮೂರನೇ ಸರಣಿ ಕಾರ್ಯಕ್ರಮದಲ್ಲಿ ಕೂಡ್ಲಿಗಿ ತಾಲೂಕಿನ ವಿಶೇಷತೆಗಳ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಪಟ್ಟಣದ ಮಹಾತ್ಮಾ ಗಾಂಧೀಜಿ ಪವಿತ್ರ ಚಿತಾಭಸ್ಮ ಇರುವ ದೇಶಭಕ್ತಿಯ ಪುಣ್ಯಕ್ಷೇತ್ರ ನಮ್ಮದಾಗಿದ್ದು ಅದೇ ರೀತಿ ಇಡೀ ಭಾರತದಲ್ಲಿ ಎಲ್ಲಿಯೂ ಕಂಡು ಕೇಳರಿಯದ ಆದಿಮಾನವ ವಾಸಿಸುತ್ತಿದ್ದ ಐತಿಹಾಸಿಕ ಕುರುಹುಗಳಾದ ಮಾನವಾಕೃತಿ ಕಲ್ಲುಗಳು ನಮ್ಮ ತಾಲೂಕಿನ ಕುಮತಿ, ಹುಲಿಕುಂಟೆ ಭಾಗದಲ್ಲಿವೆ ಇಂದಿಗೂ ಅವುಗಳನ್ನು ನೋಡಬಹುದಾಗಿದೆ ಎಂದರು. ನಮ್ಮ ತಾಲೂಕಿನಲ್ಲಿ ಗುಡೇಕೋಟೆ, ಜರ್ಮಲಿ ಮತ್ತು ವೀರನದುರ್ಗ ಈಗೇ ಮೂವರು ಪಾಳೇಗಾರರು ಆಳ್ವಿಕೆ ನೆಡಿಸಿದ್ದು ವೀರನದುರ್ಗದಲ್ಲಿ ಏಳು ಸುತ್ತಿನ ಕೋಟೆ ನೋಡಲು ಸುಂದರವಾಗಿದೆ. ಪಾಳೇಗಾರರ ವಂಶಸ್ಥರು ಇಂದಿಗೂ ತಾಲೂಕಿನಲ್ಲಿ ನಮ್ಮ ಜೊತೆ ಜೀವನ ನಡೆಸುತ್ತಿದ್ದಾರೆ ಎಂದರು. ನಮ್ಮ ತಾಲೂಕಿನಲ್ಲಿ ಪ್ರಕೃತಿ ವಿಸ್ಮಯ ಎಂಬಂತೆ ಬಿರುಬೇಸಿಗೆಯ ಸಂಧರ್ಭದಲ್ಲಿ ಶಿವರಾತ್ರಿ ದಿನದಂದು ಉರಿಬಿಸಿಲಿದ್ದರೂ ನರಸಿಂಹಗಿರಿ ಮತ್ತು ಕರಡಿಹಳ್ಳಿ ಮದ್ಯೆ ಬರುವ ಅರಣ್ಯಪ್ರದೇಶದ ಬೆಟ್ಟಗಳಲ್ಲಿ ಸುಡುವ ಬಂಡೆಯಲ್ಲಿ ಶಿವರಾತ್ರಿಯ ದಿನದಂದು ನೀರು ಸೆಲೆಯಾಗಿ ಪ್ರತ್ಯಕ್ಷವಾಗಿ 2 ತಿಂಗಳ ಕಾಲ ಹರಿಯುತ್ತಿದ್ದು ಇದಕ್ಕೆ ಸ್ಥಳೀಯರು ಬಾಧೆ ಚಿಲುಮೆ ಎಂದು ಕರೆಯುತ್ತಾರೆ. ಬರೀ ಕೈಯಿಗಳಿಂದ ಬೆಂಕಿ ಕೆಂಡ ತೂರುವ ವಿಸ್ಮಯಕಾರಿ ಆಚರಣೆ ತಾಲೂಕಿನ ಹೊಸಹಟ್ಟಿಯ ಬುಡಕಟ್ಟು ಸಮುದಾಯದ ಈಗಲೂ ನಡೆಸುತ್ತದೆ, ಎರಡು ಕೈಗಳಿಲ್ಲದ ಗುಂಡುಮುಣುಗು ಲಕ್ಷ್ಮಿ ತನ್ನ ಕೆಲಸವನ್ನು ಕಾಲಿನಿಂದ ಮಾಡಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿರುವ ಕಾಲಿನಿಂದ ಅಡುಗೆ ಮಾಡುವ ತರಕಾರಿ ಹಚ್ಚಿ ಇತರರನ್ನು ಬೆರಗುಗೊಳಿಸುವಳು.
ಭಟ್ರಹಳ್ಳಿ ಗೂಳೆಪ್ಪ ಎಂಬುವ ಅನಕ್ಷರಸ್ತ ವ್ಯಕ್ತಿಯೋರ್ವ ಕೂಡ್ಲಿಗಿ ತಾಲೂಕಿನ ಸುಮಾರು 150 ಹೆಕ್ಟೇರ್ ಅರಣ್ಯ ಪ್ರದೇಶದ ಗಿಡ ಮರಗಳನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಮರಗಳಿಗೆ ಒಂದು ಕೊಡಲಿ ಪೆಟ್ಟು ಬೀಳದಂತೆ ಸಂರಕ್ಷಣೆ ಮಾಡಿರುವ ಪರಿಸರ ಪ್ರೇಮಿ ನಮ್ಮ ತಾಲೂಕಿನಲ್ಲಿರುವುದು ಖುಷಿಯ ಸಂಗತಿಯಾಗಿದೆ ಎಂದರು. ಇನ್ನೊಂದು ವಿಶೇಷತೆ ಎಂದರೆ ಗಂಡುಮೆಟ್ಟಿನ ನಾಡು ಚಿತ್ರದುರ್ಗದ ಕೋಟೆಯ ನುಗ್ಗುತಿದ್ದ ಹೈದರಾಲಿ ಸೈನಿಕರನ್ನು ಒನಕೆ ಮೂಲಕ ಶತ್ರು ಸೈನ್ಯವನ್ನು ಸದೆಬಡಿದು ವೀರಮಹಿಳೆ ಎನಿಸಿಕೊಂಡಿರುವ ಒನಕೆ ಓಬವ್ವನ ತವರು ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಸಮೀಪದ ಕುದುರೆಡವು ಗ್ರಾಮವಾಗಿದ್ದು ಇಂದಿಗೂ ಓಬವ್ವನ ವಂಶಸ್ಥರನ್ನು ಕಾಣಬಹುದು. ಸಾಹಿತ್ಯ ಕ್ಷೇತ್ರದಲ್ಲಿ ಕೋ. ಚನ್ನಬಸಪ್ಪ, ಹಿ.ಮ.ನಾಗಯ್ಯ, ಹೆಚ್.ಎಂ. ಮರುಳಸಿದ್ದಯ್ಯ, ಸೇರಿದಂತೆ ಹಲವಾರು ಸಾಹಿತಿಗಳು ಕನ್ನಡ ನಾಡಿನಲ್ಲಿ ಗುರುತಿಸಿಕೊಂಡಿದ್ದಾರೆ. ಸರಿರಾತ್ರಿಯಲ್ಲೂ ಹಸಿದು ಬಂದವರಿಗೆ ಅನ್ನ ದಾಸೋಹ ನೀಡುವ ಕ್ಷೇತ್ರ ಕಾನಮಡಗು ಕೂಡ್ಲಿಗಿ ತಾಲೂಕಿನಲ್ಲಿರುವುದು ನಮ್ಮೆಲ್ಲರ ಹೆಮ್ಮೆ ಎಂದರು. ಅತಿಹೆಚ್ಚು ಹುಣಸೇಮರಗಳಿರುವ ಪ್ರದೇಶ ನಮ್ಮ ಕೂಡ್ಲಿಗಿಯನ್ನು ಹುಣಿಸೆನಗರಿ ಎಂದರೆ ತಪ್ಪಾಗಲಾರದು ಅಲ್ಲದೆ ಇಡೀ ರಾಜ್ಯದಲ್ಲಿ ರಂಗಭೂಮಿ ಕಲೆಯ ತವರೂರು ಕೂಡ್ಲಿಗಿ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಕಡಿಮೆ ಶಿಕ್ಷಣ ಇರುವ ರಂಗಭೂಮಿ ಕಲಾವಿದೆಯರು ಅವರ ತುದಿನಾಲಿಗೆಯಲ್ಲಿ ನೂರಾರು ನಾಟಕಗಳ ಮಾತುಗಳನ್ನು ಕೇಳುವುದೇ ಚೆಂದ. ಹಿರಿಯ ರಂಗಭೂಮಿ ಕಲಾವಿದೆಯರು ಹಾಗೂ ಕೖಷಿಯಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯೋತ್ಸವ, ನಾಟಕ ಅಕಾಡೆಮಿ ಪ್ರಶಸ್ತಿಗಳು ದೊರಕಿದ್ದು ನಮ್ಮ ತಾಲೂಕಿನಲ್ಲಿ ಸಾಧಕರಿಗೇನು ಕಡಿಮೆ ಇಲ್ಲ ಎಂದರು. ಕೂಡ್ಲಿಗಿ ತಾಲೂಕು ಆರ್ಥಿಕವಾಗಿ ಹಿಂದುಳಿದಿರಬಹುದು ಆದರೆ ಐತಿಹಾಸಿಕ, ಪರಂಪರೆ, ಭೌಗೋಳಿಕ ನೆಲೆಗಟ್ಟಿನಲ್ಲಿ ಶ್ರೀಮಂತಿಕೆ ತುಂಬಿದೆ ಎಂದು ಸಾಹಿತಿ ಭೀಮಣ್ಣ ಗಜಾಪುರ ತಿಳಿಸಿದರು. ಉಪನ್ಯಾಸಕ ವಿವೇಕಾನಂದ ಸ್ವಾಗತಿಸಿ ನಿರೂಪಿಸಿದರು, ಉಪನ್ಯಾಸಕ ಕೆ. ನಾಗರಾಜ ವಂದಿಸಿದರು. ಕೂಡ್ಲಿಗಿ ಪಟ್ಟಣದ ಗಾಂಧೀಜಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕ ಆವರಣದಲ್ಲಿ ಕೂಡ್ಲಿಗಿ ಗಾಂಧೀಜಿ ಸ್ಮಾರಕ ಸಮಿತಿ, ಮೈದಾನ ಗೆಳೆಯರ ಬಳಗ ಮತ್ತು ಜೆಸಿಐ ಕೂಡ್ಲಿಗಿ ಗೋಲ್ಡನ್ ಸಂಘಟನೆಗಳು 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರತಿ ಬುಧವಾರ ಆಯೋಜಿಸುವ ಚಿಂತನ – ಚೇತನ 3ನೇ ಸರಣಿ ಕಾರ್ಯಕ್ರಮದಲ್ಲಿ ಕೂಡ್ಲಿಗಿ ತಾಲೂಕಿನ ವಿಶೇಷತೆಗಳ ಕುರಿತು ಲೇಖಕ ಭೀಮಣ್ಣ ಗಜಾಪುರ ಉಪನ್ಯಾಸ ನೀಡಿದರು….

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
