ಚಿತ್ರದುರ್ಗ: ಮೊಳಕಾಲ್ಮುರು ತಾಲೂಕಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾದರೆ ಹೊರ ರೋಗಿಗಳ ಕೊಠಡಿಯನ್ನು ತಾತ್ಕಾಲಿಕವಾಗಿ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಡ್‌ಗಳ ಪ್ರಮಾಣವನ್ನು ಹೆಚ್ಚಿಸಿ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲುಹೇಳಿದರು. ತಾಲ್ಲೂಕಿನಲ್ಲಿ ಆಕ್ಸಿಜನ್ ಪ್ಲಾಂಟ್ ಮಂಜೂರಾತಿಗೆ ಸರ್ಕಾರದ ಗಮನಕ್ಕೆ ತರಲಾಗುವುದು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ಕೊವಿಡ್-19 ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗಕ್ಕೆ ವೈರಸ್ ಹರಡದಂತೆ ಸಂಬಂಧಿಸಿದ ಅಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕು. ಕೋವಿಡ್ ಆಸ್ಪತ್ರೆಗಳಲ್ಲಿ ಅಗತ್ಯ ಬೆಡ್, ಆಕ್ಸಿಜಿನ್ ಮತ್ತು ವೆಂಟಿಲೇಟರ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು. ತಹಸೀಲ್ದಾರ್ ಕೆ.ಸುರೇಶಕುಮಾರ್ ಮಾತನಾಡಿ, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ 51 ಬೆಡ್‌ಗಳನ್ನು ಕಲ್ಪಿಸಲಾಗಿದೆ. ಮುಂಜಾಗ್ರತೆಯಾಗಿ ಆದರ್ಶ, ಮುರಾರ್ಜಿ ವಸತಿಶಾಲೆಗಳಲ್ಲಿ ವ್ಯವಸ್ಥೆಮಾಡಿಕೊಳ್ಳಲಾಗಿದೆ. ಈ ಸಂಬಂಧವಾಗಿ ಈಗಾಗಲೆ ಎರಡೂ ಶಾಲೆಗಳಿಗೆ ತೆರಳಿ ಅಗತ್ಯ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ ಎಂದರು. ಕ್ಯಾರಂಟೈನ್‌ನಲ್ಲಿ ಇರುವಂತಹವರನ್ನು ಕೋವಿಡ್ ಸೆಂಟರ್‌ಗೆ ಕರೆತಂದು ಸೂಕ್ತ ಚಿಕಿತ್ಸೆ ನೀಡಬೇಕು. ಅಲ್ಲಿ ಆಕ್ಸಿಜನ್ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಸಾರ್ವಜನಿಕವಾಗಿ ಯಾವುದೇ ದೂರುಗಳು ಬಂದರೂ ಸಂಬಂ ಧಿಸಿದ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತೀರಿ ಎಂದು ಎಚ್ಚರಿಸಿದರು. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ತಾಲೂಕಿನ ಎಲ್ಲ ಅಧಿಕಾರಿಗಳು ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಓಡಾಡಲು ಸೂಚಿಸಬೇಕು. ಅನಗತ್ಯವಾಗಿ ಓಡಾಡುವುದನ್ನು ತಡೆದು ಮನೆಗಳಲ್ಲಿ ಇರುವಂತೆ ಅರಿವು ಮೂಡಿಸಬೇಕು. ಗ್ರಾಪಂಗಳು, ಹಳ್ಳಿಗಳಲ್ಲಿ ಔಷಧ ಸಿಂಪಡಣೆಮಾಡಲು ಸೂಚಿಸಬೇಕು. ಈ ಕುರಿತು ನಿರ್ಲಕ್ಷ್ಯ ಸಲ್ಲದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾ.ಪಂ ಇ.ಒ ಮಾರುತಿ, ವೈದ್ಯಾಧಿಕಾರಿ ಡಾ,ಸುಧಾ, ಆಸ್ಪತ್ರೆ ಆಡಳಿತಾಧಿಕಾರಿ ಡಾ.ಅಭಿನವ್, ಸಿ.ಪಿ.ಐ ಜಿ.ಬಿ. ಉಮೇಶ್ ನಾಯಕ, ಪಿಎಸ್‌ಐ ಎಂ.ಕೆ.ಬಸವರಾಜ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸವಿತಾ, ಮುಖ್ಯಾಧಿಕಾರಿ ಕಾಂತರಾಜ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
