;

ಪ್ರಸ್ತುತ ಆರೋಗ್ಯ ಮತ್ತು ವೈದ್ಯ ಲೋಕ…!!!!

ಪ್ರಸ್ತುತ ಆರೋಗ್ಯ ಮತ್ತು ವೈದ್ಯ ಲೋಕ…

ಬಿಳಿ ಕೋಟಿನ ಹಿಂದಿನ ವಿಭಿನ್ನ ಕಥೆಗಳು, ಆರೋಗ್ಯವೇಭಾಗ್ಯ ಹಳೆ ಗಾದೆ ಮೂಲೆ ಗುಂಪಾಗಿ ಮೊಬೈಲೇ ಮಹಾ ಭಾಗ್ಯವಾಗಿದೆ.
ಇಂದಿನ ಯುವ ಜನಾಂಗದ ಬಹುತೇಕರ ಬದುಕು ಕಳೆದು ಹೋಗುವುದು ರೀಲ್ಸ್‌ನಲ್ಲೇ.
ನಿದ್ದೆಯಿಲ್ಲದ ಜೀವನ ಅದು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಅದಕ್ಕೆ ವೈದ್ಯರಿಂದ ಚಿಕಿತ್ಸೆ ನೀಡಲು ಸಾಧ್ಯವೇ? ಹೀಗೆ ಅನೇಕ ಯೋಚನೆಗಳು ಬರುತ್ತವೆ. ಇರಲಿ, ಮತ್ತೊಮ್ಮೆ ಇದರ ಬಗ್ಗೆ ಆಳವಾಗಿ ಯೋಚಿಸೋಣ.

ಜುಲೈ ತಿಂಗಳ ಕ್ಯಾಲೆಂಡರ್‌ನಲ್ಲಿ ಕೆಂಪು ಅಕ್ಷರದಲ್ಲಿ “ರಾಷ್ಟ್ರೀಯ ವೈದ್ಯರ ದಿನ” ಎಂದು ಬರೆದಿರುತ್ತದೆ. ಈ ದಿನ ಸಾಮಾನ್ಯ ದಿನವಲ್ಲ. ಇದು ನಮ್ಮ ಬದುಕನ್ನು ಉಳಿಸುವ, ನೋವನ್ನು ಕಡಿಮೆ ಮಾಡುವ, ಕಣ್ಣೀರನ್ನು ಒರೆಸುವ ಕೈಗಳಿಗೆ ನಮನ ಸಲ್ಲಿಸುವ ದಿನ.
ಭಾರತದಲ್ಲಿ ಜುಲೈ ಒಂದರಂದು ವೈದ್ಯರ ದಿನ ಆಚರಿಸಲು ಒಂದು ಕಾರಣವಿದೆ. ಡಾ. ಬಿಧಾನ್ ಚಂದ್ರ ರಾಯ್. ಅವರು ಜುಲೈ ಒಂದರಂದೇ ಹುಟ್ಟಿದರು, ಜುಲೈ ಒಂದರಂದೇ ಕೊನೆಯುಸಿರೆಳೆದರು. ವೈದ್ಯರಾಗಿ ಲಕ್ಷಾಂತರ ಜೀವ ಉಳಿಸಿದರು, ಸ್ವಾತಂತ್ರ್ಯ ಹೋರಾಟಗಾರರಾಗಿ ದೇಶ ಕಟ್ಟಿದರು, ಮುಖ್ಯಮಂತ್ರಿಯಾಗಿ ಪಶ್ಚಿಮ ಬಂಗಾಳವನ್ನು ತಿದ್ದಿದರು. “ವೈದ್ಯನೆಂದರೆ ಸಮಾಜದ ಕಾವಲುಗಾರ” ಎಂದು ಬದುಕಿ ತೋರಿಸಿದರು. ಹಾಗಾಗಿ ಈ ದಿನ ಅವರ ನೆನಪಿನಲ್ಲಿ, ಅವರಂತಹ ಲಕ್ಷಾಂತರ ವೈದ್ಯರ ಸೇವೆಯ ನೆನಪಿನಲ್ಲಿ ನಾವು ತಲೆಬಾಗುತ್ತೇವೆ.

ವಿಶ್ವ ಮಟ್ಟದಲ್ಲಿ ಮಾರ್ಚ್ ಮೂವತ್ತರಂದು ವೈದ್ಯರ ದಿನ ಆಚರಿಸಿದರೂ, ನಮ್ಮ ದೇಶದ ಮಣ್ಣಿನ ವಾಸನೆ, ನಮ್ಮ ಹಳ್ಳಿಯ ನೋವು-ನಲಿವು ಅರ್ಥ ಮಾಡಿಕೊಳ್ಳಲು ಜುಲೈ ಒಂದು ನಮಗೆ ಹತ್ತಿರ. ಈ ದಿನದಂದು ಪ್ರಸ್ತುತ ಆರೋಗ್ಯ ಲೋಕ ಹೇಗಿದೆ, ವೈದ್ಯ ಲೋಕ ಯಾವ ದಾರಿಯಲ್ಲಿ ನಡೆಯುತ್ತಿದೆ ಎಂದು ತಿಳಿದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.

*ವೈದ್ಯ: ದೇವರಲ್ಲ, ಆದರೆ ದೇವರ ಕೆಲಸ ಮಾಡುವ ಮನುಷ್ಯ*

ಹಳ್ಳಿಯ ಹಿರಿಯರು ಇಂದಿಗೂ ಹೇಳುತ್ತಾರೆ – “ಮಣ್ಣಿನ ಮಗನಿಗೆ ಮೂರು ದೇವರು. ಹೆತ್ತ ತಾಯಿ, ಅನ್ನ ಕೊಡುವ ರೈತ, ಪ್ರಾಣ ಉಳಿಸುವ ವೈದ್ಯ”. ಈ ಮಾತಿನಲ್ಲಿ ಅತಿಶಯೋಕ್ತಿ ಇಲ್ಲ. ತಾಯಿ ಹುಟ್ಟು ಕೊಡುತ್ತಾಳೆ. ರೈತ ಹೊಟ್ಟೆ ತುಂಬಿಸುತ್ತಾನೆ. ವೈದ್ಯ ಆ ಹುಟ್ಟು ಮತ್ತು ಹೊಟ್ಟೆ ಎರಡೂ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುತ್ತಾನೆ.
ಆದರೆ ಇವತ್ತಿನ ಕಾಲದಲ್ಲಿ ವೈದ್ಯನ ಸ್ಥಾನ ಡೋಲಾಯಮಾನವಾಗಿದೆ. ಒಂದು ಕಡೆ ಅವನನ್ನು “ದೇವರು” ಎಂದು ಕೈಮುಗಿಯುತ್ತೇವೆ. ಮತ್ತೊಂದು ಕಡೆ “ಸುಲಿಗೆಕೋರ” ಎಂದು ಬೈಯುತ್ತೇವೆ. ಕೋವಿಡ್ ಮಹಾಮಾರಿ ಬಂದಾಗ ಇಡೀ ದೇಶ ಮನೆ ಸೇರಿತ್ತು. ಆಗ ರಸ್ತೆಯಲ್ಲಿ ಇದ್ದವರು ಯಾರು? ಪೊಲೀಸ್, ಪೌರಕಾರ್ಮಿಕ ಮತ್ತು ವೈದ್ಯ. PPE ಕಿಟ್ ಎಂಬ ಪ್ಲಾಸ್ಟಿಕ್ ಬಟ್ಟೆಯಲ್ಲಿ ಬೆವತು, ಮೂಗಿಗೆ ಗಾಯ ಮಾಡಿಕೊಂಡು, ಮೂತ್ರ ವಿಸರ್ಜನೆಗೂ ಹೋಗದೆ ಹದಿನೆಂಟು ಗಂಟೆ ದುಡಿದರು. ತಮ್ಮ ಮಕ್ಕಳ ಮುಖವನ್ನು ವಿಡಿಯೋ ಕಾಲ್‌ನಲ್ಲಿ ನೋಡಿ ಕಣ್ಣೀರು ಒರೆಸಿಕೊಂಡರು. ಎಷ್ಟೋ ಜನ ವೈದ್ಯರು, ನರ್ಸ್‌ಗಳು ರೋಗಿಗಳಿಗೆ ಚಿಕಿತ್ಸೆ ಕೊಡುತ್ತಾ ತಾವೇ ಸೋಂಕಿಗೆ ಬಲಿಯಾದರು. ಅವರ ಹೆಣವನ್ನು ಮನೆಗೆ ತೆಗೆದುಕೊಂಡು ಹೋಗಲು ಊರಿನವರೇ ಬಿಡಲಿಲ್ಲ. ಇದು ನಾವು ನೋಡಿದ ಕಹಿ ಸತ್ಯ.
ಅದೇ ಸಮಯದಲ್ಲಿ ಇನ್ನೊಂದು ಮುಖವನ್ನೂ ನೋಡಿದೆವು. ಆಕ್ಸಿಜನ್ ಸಿಲಿಂಡರ್ ಕಾಳಸಂತೆ, ಆಂಬುಲೆನ್ಸ್‌ಗೆ ಲಕ್ಷ ಲಕ್ಷ ಬಿಲ್, ಬೆಡ್ ಇಲ್ಲ ಎಂದು ರೋಗಿಯನ್ನು ಹೊರಗೆ ನಿಲ್ಲಿಸಿದ ಆಸ್ಪತ್ರೆಗಳು. ಜನರ ಕೋಪ ಸಹಜ. “ಕಾಸಿಗಾಗಿ ಹೆಣದ ಮೇಲೆ ವ್ಯಾಪಾರ ಮಾಡುತ್ತಾರೆ” ಎಂದು ಜನ ವೈದ್ಯರ ಮೇಲೆ ಹಲ್ಲೆ ಮಾಡಿದರು. ಆಸ್ಪತ್ರೆಗೆ ಕಲ್ಲು ಹೊಡೆದರು. [ಎಲ್ಲಾ ವೈದ್ಯರು ಹೀಗೆ, ಎಲ್ಲಾ ಜನರು ಹೀಗೆ ಮಾಡುತ್ತಾರೆಂದು ನಾನು ದೂಷಣೆ ಮಾಡುತ್ತಿಲ್ಲ]
ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾದ ಸೂಕ್ಷ್ಮ ಇದೆ. ವೈದ್ಯ ಲೋಕ ಎಂದರೆ ಕೇವಲ ಒಬ್ಬ ಡಾಕ್ಟರ್ ಅಲ್ಲ. ಅದು ಒಂದು ವ್ಯವಸ್ಥೆ. ಆ ವ್ಯವಸ್ಥೆಯಲ್ಲಿ ಪ್ರಾಮಾಣಿಕ ಸೇವೆ ಮಾಡುವ ಲಕ್ಷಾಂತರ ವೈದ್ಯರಿದ್ದಾರೆ, ನರ್ಸ್‌ಗಳಿದ್ದಾರೆ, ಆಶಾ ಕಾರ್ಯಕರ್ತೆಯರಿದ್ದಾರೆ. ಅದೇ ವ್ಯವಸ್ಥೆಯಲ್ಲಿ ಲಾಭಕೋರ ಆಸ್ಪತ್ರೆ ಮಾಲೀಕರಿದ್ದಾರೆ, ಔಷಧ ಕಂಪನಿಯ ದಲ್ಲಾಳಿಗಳಿದ್ದಾರೆ. ನಾವು ಬೈಯುವಾಗ, ಕಲ್ಲು ಹೊಡೆಯುವಾಗ ನಮ್ಮ ಮುಂದೆ ನಿಲ್ಲುವುದು ಆ ಪ್ರಾಮಾಣಿಕ ವೈದ್ಯ. ಅವನ ಕೈಯಲ್ಲಿ ಚಾಕು ಇಲ್ಲ, ಸ್ಟೆಥ್ ಇದೆ. ಅವನ ತಪ್ಪಿಲ್ಲದೆ ಅವನು ಏಟು ತಿನ್ನುತ್ತಾನೆ.

ಹಾಗಾಗಿ ಇವತ್ತಿನ ವೈದ್ಯನ ಮೊದಲ ಸವಾಲು “ನಂಬಿಕೆ” ಉಳಿಸಿಕೊಳ್ಳುವುದು. “ನಾನು ನಿಮ್ಮವನು, ನಿಮ್ಮ ಜೀವ ಉಳಿಸಲು ಬಂದಿದ್ದೇನೆ” ಎಂದು ರೋಗಿಗೆ ಮನವರಿಕೆ ಮಾಡಿಕೊಡುವುದು. ಇದಕ್ಕೆ ಅವನಿಗೆ ಸಮಯ ಬೇಕು, ತಾಳ್ಮೆ ಬೇಕು, ಸಮಾಜದ ಬೆಂಬಲ ಬೇಕು.

*ಹಳ್ಳಿಯ ಗುಡಿಸಲಿನಿಂದ ಮೆಟ್ರೋ ನಗರದ ಕಾರ್ಪೊರೇಟ್ ಆಸ್ಪತ್ರೆವರೆಗೆ: ಆರೋಗ್ಯದ ಪಯಣ*

ನಮ್ಮ ಅಜ್ಜನ ಕಾಲದ ಕಥೆ ಕೇಳಿದರೆ ಆಶ್ಚರ್ಯ ಆಗುತ್ತದೆ. ಊರಿಗೆ ಒಬ್ಬನೇ ದೊಡ್ಡ ಡಾಕ್ಟರ್. ಅವನೇ ಮಕ್ಕಳಿಗೆ ಲಸಿಕೆ ಹಾಕುವುದು, ಹೆರಿಗೆ ಮಾಡಿಸುವುದು, ಹಾವಾಡಿಸಿ ವಿಷ ತೆಗೆಯುವುದು, ಎಲುಬು ಕೂಡಿಸುವುದು. ಅವನ ಬಳಿ ದೊಡ್ಡ ಯಂತ್ರ ಇರಲಿಲ್ಲ. ಆದರೆ ದೊಡ್ಡ ಹೃದಯ ಇತ್ತು. ರೋಗಿಯ ನಾಡಿ ಮುಟ್ಟಿದರೆ ಅವನಿಗೆ ಅರ್ಧ ರೋಗ ಗೊತ್ತಾಗುತ್ತಿತ್ತು. “ಅವ್ವಾ, ಭಯ ಪಡಬೇಡ, ನಾನಿದ್ದೇನಿ” ಎಂಬ ಅವನ ಒಂದು ಮಾತಿಗೆ ಜ್ವರ ಅರ್ಧ ಕಡಿಮೆ ಆಗುತ್ತಿತ್ತು.

ಈಗ ಕಾಲ ಬದಲಾಗಿದೆ. ಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆದಿದೆ. ಅಲ್ಲಿ ಒಬ್ಬ ಡಾಕ್ಟರ್, ಇಬ್ಬರು ನರ್ಸ್, ಔಷಧದ ಅಂಗಡಿ ಇದೆ. ತಾಲೂಕು ಮಟ್ಟದಲ್ಲಿ ಮೂವತ್ತು ಬೆಡ್‌ನ ಆಸ್ಪತ್ರೆ ಇದೆ. ಜಿಲ್ಲಾ ಮಟ್ಟದಲ್ಲಿ ಮೆಡಿಕಲ್ ಕಾಲೇಜು ಇದೆ. ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಅರಮನೆ ತರಹದ ಆಸ್ಪತ್ರೆಗಳಿವೆ. ಅಲ್ಲಿ ರೋಬೋಟ್ ಕೈಯಿಂದ ಆಪರೇಷನ್ ಮಾಡುತ್ತಾರೆ. ಗಾಳಿಯಲ್ಲಿ ನೇತಾಡುವ ಸ್ಕ್ಯಾನಿಂಗ್ ಮೆಷಿನ್ ಇದೆ. ಒಂದು ಸೂಜಿ ಚುಚ್ಚದೆ ದೇಹದ ಒಳಗಿನ ಫೋಟೋ ತೆಗೆಯುತ್ತಾರೆ.

ಇದು ಬೆಳವಣಿಗೆ. ಇದನ್ನು ನಾವು ಸ್ವಾಗತಿಸಬೇಕು. ಕೋವಿಡ್ ಸಮಯದಲ್ಲಿ “ಟೆಲಿ-ಮೆಡಿಸಿನ್” ಎಂಬ ಹೊಸ ದಾರಿ ತೆರೆದುಕೊಂಡಿತು. ಯಲ್ಲಬುರ್ಗದ ತಾತನಿಗೆ ಎದೆ ನೋವು ಬಂದರೆ, ಅವನು ಮೊಬೈಲ್‌ನಲ್ಲಿ ಬೆಂಗಳೂರಿನ ಹೃದ್ರೋಗ ತಜ್ಞರ ಜೊತೆ ಮಾತನಾಡಬಹುದು. ಡಾಕ್ಟರ್ ಇಲ್ಲದ ಊರಿಗೂ ತಜ್ಞರ ಸಲಹೆ ಸಿಗುತ್ತದೆ. “ಇ-ಸಂಜೀವಿನಿ” ಎಂಬ ಸರ್ಕಾರಿ ಆಪ್‌ನಲ್ಲಿ ಉಚಿತವಾಗಿ ಡಾಕ್ಟರ್ ಸಲಹೆ ಸಿಗುತ್ತದೆ. ಆಶಾ ಕಾರ್ಯಕರ್ತೆ ಎಂಬ ಅಕ್ಕ ಮನೆ ಬಾಗಿಲಿಗೆ ಬಂದು BP ಚೆಕ್ ಮಾಡುತ್ತಾಳೆ, ಗರ್ಭಿಣಿಗೆ ಮಾತ್ರೆ ಕೊಡುತ್ತಾಳೆ. “ಆಯುಷ್ಮಾನ್ ಭಾರತ್” ಕಾರ್ಡ್ ಇಟ್ಟುಕೊಂಡು ಬಡವನೂ ಐದು ಲಕ್ಷದ ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು.
ಆದರೆ ಈ ಬೆಳವಣಿಗೆಯ ಜೊತೆ ಒಂದು ಕಂದಕವೂ ಬೆಳೆದಿದೆ. ಹಳ್ಳಿಯ ಗಂಗವ್ವನಿಗೆ ಕಿಡ್ನಿ ಕಾಯಿಲೆ ಆದರೆ, ಅವಳನ್ನು ಮೊದಲು PHCಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಡಯಾಲಿಸಿಸ್ ಮೆಷಿನ್ ಇಲ್ಲ. “ಜಿಲ್ಲಾಸ್ಪತ್ರೆಗೆ ಹೋಗಿ” ಎನ್ನುತ್ತಾರೆ. ಜಿಲ್ಲಾಸ್ಪತ್ರೆಯಲ್ಲಿ ನೆಫ್ರಾಲಜಿಸ್ಟ್ ಡಾಕ್ಟರ್ ಇಲ್ಲ. “ಹುಬ್ಬಳ್ಳಿಗೆ ಹೋಗಿ” ಎನ್ನುತ್ತಾರೆ. ಹುಬ್ಬಳ್ಳಿ ಸೇರುವಷ್ಟರಲ್ಲಿ ರೋಗಿಯ ಸ್ಥಿತಿ ಗಂಭೀರ ಆಗಿರುತ್ತದೆ. ಜೊತೆಗೆ ಬಸ್ಸಿನ ಖರ್ಚು, ಊಟದ ಖರ್ಚು, ಆಸ್ಪತ್ರೆ ಹತ್ರ ರೂಮ್ ಬಾಡಿಗೆ – ಒಂದು ಬಡ ಕುಟುಂಬಕ್ಕೆ ಇದು ದೊಡ್ಡ ಹೊರೆ. [ನಾನು ಕಂಡ ನೈಜ ಘಟನೆಯನ್ನಾಧರಿಸಿ ಬರೆದಿರುವುದು]
ಹಾಗಂತ ಪರಿಹಾರ ಇಲ್ಲವಾ? ಇದೆ. ಸರ್ಕಾರ ಈಗ “ಆರೋಗ್ಯ ಮತ್ತು ಕ್ಷೇಮ ಕೇಂದ್ರ” ಎಂದು PHCಗಳನ್ನು ಮೇಲ್ದರ್ಜೆಗೆ ಏರಿಸುತ್ತಿದೆ. ಅಲ್ಲಿ ಟೆಲಿ-ಮೆಡಿಸಿನ್ ವ್ಯವಸ್ಥೆ, ಅಗತ್ಯ ಔಷಧ, ತಪಾಸಣೆ ಸಿಗುವಂತೆ ಮಾಡುತ್ತಿದೆ. 108 ಆಂಬುಲೆನ್ಸ್ ಈಗ ಹತ್ತು ನಿಮಿಷದಲ್ಲಿ ಹಳ್ಳಿ ತಲುಪುತ್ತದೆ. ನಿಧಾನವಾಗಿಯಾದರೂ ಬದಲಾವಣೆ ಆಗುತ್ತಿದೆ.

ಇವತ್ತಿನ ವೈದ್ಯ ಲೋಕದ ಮುಂದಿರುವ ದೊಡ್ಡ ಗುರಿ “ಕೊನೆಯ ವ್ಯಕ್ತಿಗೂ ಗುಣಮಟ್ಟದ ಚಿಕಿತ್ಸೆ”. ಹಣ ಇರುವವನಿಗೆ ಮಾತ್ರ ಬೆಂಗಳೂರಿನ ಕಾರ್ಪೊರೇಟ್ ಆಸ್ಪತ್ರೆ, ಇಲ್ಲದವನಿಗೆ ಸರ್ಕಾರಿ ಆಸ್ಪತ್ರೆಯ ವರಾಂಡಾ – ಈ ತಾರತಮ್ಯ ಹೋಗಬೇಕು. ಆರೋಗ್ಯ ಎಂಬುದು ವ್ಯಾಪಾರ ಅಲ್ಲ, ಅದು ಹಕ್ಕು ಎಂಬ ಭಾವನೆ ಬರಬೇಕು.

*ರೋಗದ ಮುಖವಾಡ ಬದಲಾಯಿತು: ಸಾಂಕ್ರಾಮಿಕದಿಂದ ಜೀವನಶೈಲಿ ಕಾಯಿಲೆಗೆ*

ನಮ್ಮ ತಂದೆಯ ಕಾಲದಲ್ಲಿ ಜನ ಯಾವ ರೋಗಕ್ಕೆ ಹೆಚ್ಚು ಸಾಯುತ್ತಿದ್ದರು? ಮಲೇರಿಯಾ, ಕಾಲರಾ, ಟಿಬಿ, ಸಿಡುಬು, ಪೋಲಿಯೋ. ಇವೆಲ್ಲ ಸಾಂಕ್ರಾಮಿಕ ರೋಗಗಳು. ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. ವೈದ್ಯ ಲೋಕ ಈ ರೋಗಗಳ ವಿರುದ್ಧ ದೊಡ್ಡ ಯುದ್ಧ ಮಾಡಿತು. ಲಸಿಕೆ ಕಂಡುಹಿಡಿಯಿತು. ಸಿಡುಬು ರೋಗವನ್ನು ಈ ಭೂಮಿಯಿಂದಲೇ ಓಡಿಸಿತು. ಪೋಲಿಯೋವನ್ನು ಭಾರತದಿಂದ ಓಡಿಸಿತು. ಇದು ಮನುಕುಲದ ದೊಡ್ಡ ಸಾಧನೆ. ಇದರ ಶ್ರೇಯಸ್ಸು ವೈದ್ಯರಿಗೆ, ವಿಜ್ಞಾನಿಗಳಿಗೆ, ಲಸಿಕೆ ಹಾಕಲು ಮನೆಮನೆಗೆ ತಿರುಗಿದ ಆರೋಗ್ಯ ಕಾರ್ಯಕರ್ತೆಯರಿಗೆ ಸಲ್ಲಬೇಕು.
ಆದರೆ ಈಗ ಯುದ್ಧದ ಮೈದಾನ ಬದಲಾಗಿದೆ. ಈಗ ಜನ ಸಾಯುತ್ತಿರುವುದು “ಜೀವನಶೈಲಿ ರೋಗಗಳಿಂದ” – BP, ಸಕ್ಕರೆ ಕಾಯಿಲೆ, ಹೃದಯಾಘಾತ, ಸ್ಟ್ರೋಕ್, ಕ್ಯಾನ್ಸರ್, ಬೊಜ್ಜು, ಮಾನಸಿಕ ಖಿನ್ನತೆ. ಇವು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ಇವು ನಮ್ಮ ತಟ್ಟೆಗೆ ಬರುತ್ತವೆ, ನಮ್ಮ ಕುರ್ಚಿಗೆ ಬರುತ್ತವೆ, ನಮ್ಮ ಮೊಬೈಲ್‌ಗೆ ಬರುತ್ತವೆ.
ಹೇಗೆ? ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುತ್ತೇವೆ. ತಿಂಡಿಗೆ ಬನ್-ಬಜ್ಜಿ ತಿನ್ನುತ್ತೇವೆ. ಕೆಲಸಕ್ಕೆ ಬೈಕ್ ಅಥವಾ ಕಾರಿನಲ್ಲಿ ಹೋಗುತ್ತೇವೆ. ಎಂಟು ಗಂಟೆ ಕುರ್ಚಿಯಲ್ಲಿ ಕೂತು ಕಂಪ್ಯೂಟರ್ ನೋಡುತ್ತೇವೆ. ಸಂಜೆ ಮನೆಗೆ ಬಂದು ಟಿವಿ ಮುಂದೆ ಕೂತು ಕುರ್ಕುರೆ ತಿನ್ನುತ್ತೇವೆ. ರಾತ್ರಿ ಹನ್ನೆರಡು ಗಂಟೆಯವರೆಗೆ ಮೊಬೈಲ್ ನೋಡಿ ಮಲಗುತ್ತೇವೆ. ನಡಿಗೆ ಇಲ್ಲ, ನಿದ್ದೆ ಇಲ್ಲ, ನೆಮ್ಮದಿ ಇಲ್ಲ. ಮೇಲೆ ಕೋಪ, ಟೆನ್ಷನ್, ಸ್ಪರ್ಧೆ. ಇದರ ಫಲಿತಾಂಶವೇ BP, ಸಕ್ಕರೆ, ಅಟ್ಯಾಕ್ ಇತ್ಯಾದಿ.

ಇವತ್ತಿನ ವೈದ್ಯ ಕೇವಲ “ಈ ಮಾತ್ರೆ ತಗೊಳ್ಳಿ” ಎಂದು ಚೀಟಿ ಬರೆದುಕೊಟ್ಟರೆ ಸಾಲದು. ಅವನು “ಗುರು” ಆಗಬೇಕು. “ಅಪ್ಪಾ, ದಿನಾ ಅರ್ಧ ಗಂಟೆ ನಡಿ. ಎಣ್ಣೆ ಪದಾರ್ಥ ಕಡಿಮೆ ಮಾಡು. ರಾತ್ರಿ ಬೇಗ ಮಲಗು. ಯೋಗ, ಪ್ರಾಣಾಯಾಮ ಮಾಡು. ಕೋಪ ಬಂದಾಗ ಒಂದು ಲೋಟ ನೀರು ಕುಡಿ” ಎಂದು ಪಾಠ ಮಾಡಬೇಕು.
ಮಾನಸಿಕ ಆರೋಗ್ಯ ಇವತ್ತಿನ ದೊಡ್ಡ ಸವಾಲು. ಹಿಂದೆ “ಅವನಿಗೆ ತಲೆ ಸರಿ ಇಲ್ಲ” ಎಂದು ಕಟ್ಟಿಹಾಕುತ್ತಿದ್ದರು. ಈಗ ಡಿಪ್ರೆಷನ್, ಆತಂಕ, OCD, ಒಂಟಿತನ – ಇವೆಲ್ಲವೂ ಮಿದುಳಿನ ಕಾಯಿಲೆ. ದೇಹದ ಕಾಯಿಲೆ ತರಹನೇ ಇದಕ್ಕೂ ಚಿಕಿತ್ಸೆ ಇದೆ ಎಂದು ವೈದ್ಯ ಲೋಕ ಹೇಳುತ್ತಿದೆ. ಮನೋವೈದ್ಯರ ಬಳಿ ಹೋಗುವುದು ಅವಮಾನ ಅಲ್ಲ, ಅದೂ ಒಂದು ಧೈರ್ಯ. ಸರ್ಕಾರ “ಟೆಲಿ-ಮಾನಸ್” ಎಂಬ 14416 ಸಹಾಯವಾಣಿ ಶುರು ಮಾಡಿದೆ. ಮನಸ್ಸು ಭಾರ ಎನಿಸಿದಾಗ, ಬದುಕು ಸಾಕು ಎನಿಸಿದಾಗ ಅಲ್ಲಿಗೆ ಫೋನ್ ಮಾಡಿದರೆ ಕನ್ನಡದಲ್ಲೇ ಮಾತನಾಡಿ ಧೈರ್ಯ ತುಂಬುತ್ತಾರೆ. ಇದು ದೊಡ್ಡ ಬದಲಾವಣೆ.

*ವೈದ್ಯ-ರೋಗಿ ಸಂಬಂಧ: ಮಾತ್ರೆಗಿಂತ ಮುಖ್ಯವಾದ ಮಾತು*

ಒಬ್ಬ ಅನುಭವಿ ವೈದ್ಯರು ಹೇಳಿದ ಕಥೆ ಇದು. ಒಬ್ಬ ಅಜ್ಜಿ ಎದೆ ನೋವು ಎಂದು ಆಸ್ಪತ್ರೆಗೆ ಬಂದಿದ್ದರು. ಎಲ್ಲಾ ಟೆಸ್ಟ್ ಮಾಡಿದರು. ರಿಪೋರ್ಟ್ ನಾರ್ಮಲ್. ಆದರೆ ಅಜ್ಜಿಗೆ ನೋವು ಕಡಿಮೆ ಆಗಲಿಲ್ಲ. ವೈದ್ಯರು ಅಜ್ಜಿಯ ಕೈ ಹಿಡಿದು “ಅಜ್ಜಿ, ಮನೆಯಲ್ಲಿ ಏನಾದರೂ ಚಿಂತೆ ಇದೆಯಾ?” ಎಂದು ಕೇಳಿದರು. ಅಜ್ಜಿ ಕಣ್ಣೀರು ಹಾಕುತ್ತಾ “ಮಗ ಸೊಸೆ ಜೊತೆ ಜಗಳ ಮಾಡಿಕೊಂಡು ಆರು ತಿಂಗಳಿಂದ ಮಾತಾಡಿಸಿಲ್ಲ” ಎಂದರು. ವೈದ್ಯರು ಒಂದು ಮಾತ್ರೆಯೂ ಬರೆಯಲಿಲ್ಲ. “ನಾಳೆ ಮಗನಿಗೆ ಫೋನ್ ಮಾಡಿ ಊಟಕ್ಕೆ ಕರಿ” ಎಂದರು. ಅಜ್ಜಿ ಹಾಗೆಯೇ ಮಾಡಿದರು. ವಾರದ ನಂತರ ಅಜ್ಜಿ ಬಂದು “ಡಾಕ್ಟ್ರೇ, ನನ್ನ ಎದೆ ನೋವು ಮಾಯವಾಯಿತು” ಎಂದರು.

ಇದೇ ವೈದ್ಯಕೀಯದ ಜೀವಾಳ. ಯಂತ್ರ ರೋಗವನ್ನು ನೋಡುತ್ತದೆ. ವೈದ್ಯ ರೋಗಿಯನ್ನು ನೋಡುತ್ತಾನೆ. ರೋಗಿಗೆ ಜ್ವರ ನೂರಾ ನಾಲ್ಕು ಇದ್ದರೂ, ವೈದ್ಯ “ಭಯ ಪಡಬೇಡ, ನಾನಿದ್ದೇನೆ” ಎಂದು ತಲೆ ಸವರಿದರೆ ಜ್ವರ ನೂರಾ ಎರಡಕ್ಕೆ ಇಳಿಯುತ್ತದೆ. ಇದಕ್ಕೆ “ಪ್ಲಸಿಬೋ ಎಫೆಕ್ಟ್” ಎಂದು ವಿಜ್ಞಾನವೇ ಹೆಸರಿಟ್ಟಿದೆ. ಪ್ರೀತಿ, ಕಾಳಜಿ, ನಂಬಿಕೆ – ಇವೇ ಅರ್ಧ ಔಷಧ.

ಆದರೆ ಇವತ್ತಿನ ವೇಗದ ಯುಗದಲ್ಲಿ ಈ ಸ್ಪರ್ಶ ಕಡಿಮೆಯಾಗುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಒಬ್ಬ ವೈದ್ಯ ದಿನಕ್ಕೆ ಇನ್ನೂರು ರೋಗಿ ನೋಡಬೇಕು. ಒಬ್ಬೊಬ್ಬರಿಗೆ ಒಂದು ನಿಮಿಷ. “ಏನಾಗಿದೆ? ಈ ಮಾತ್ರೆ ತಗೊಳ್ಳಿ. ಮುಂದಿನವರು ಬನ್ನಿ” ಎನ್ನುವಷ್ಟರಲ್ಲಿ ಸಮಯ ಮುಗಿದಿರುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ಬಿಲ್, ಇನ್ಶೂರೆನ್ಸ್, ಕಾನೂನಿನ ಭಯ. ವೈದ್ಯನಿಗೆ “ನಾನು ಏನಾದರೂ ಹೇಳಿದರೆ, ಕೋರ್ಟ್ ಕೇಸ್ ಆಗುತ್ತದೆಯೋ” ಎಂಬ ಅಳುಕು. ಇದರ ಮಧ್ಯೆ ರೋಗಿಯ ಜೊತೆ ಎರಡು ನಿಮಿಷ ಪ್ರೀತಿಯಿಂದ ಮಾತನಾಡಲು ಹೇಗೆ ಸಾಧ್ಯ?

ಹಾಗಾಗಿ ರೋಗಿಗಳಾದ ನಮ್ಮ ಜವಾಬ್ದಾರಿಯೂ ಇದೆ. ವೈದ್ಯರನ್ನು “ಗೂಗಲ್ ಡಾಕ್ಟರ್” ಮಾಡಬೇಡಿ. “ಇಂಟರ್ನೆಟ್‌ನಲ್ಲಿ ಹೀಗೆ ಬರೆದಿದೆ, ನೀವು ಯಾಕೆ ಹೀಗೆ ಹೇಳ್ತೀರಿ” ಎಂದು ಜಗಳ ಮಾಡಬೇಡಿ. ಗೂಗಲ್ ನಿಮಗೆ ಮಾಹಿತಿ ಕೊಡುತ್ತದೆ. ವೈದ್ಯ ನಿಮಗೆ ಅನುಭವದ ಚಿಕಿತ್ಸೆ ಕೊಡುತ್ತಾನೆ. ಅನುಮಾನ ಇದ್ದರೆ ನಯವಾಗಿ ಕೇಳಿ. “ಡಾಕ್ಟ್ರೇ, ನನಗೆ ಹೀಗೆ ಅನಿಸುತ್ತಿದೆ, ಸ್ವಲ್ಪ ವಿವರಿಸಿ” ಎನ್ನಿ. ಎರಡನೇ ಅಭಿಪ್ರಾಯ ಬೇಕಿದ್ದರೆ ತಪ್ಪಿಲ್ಲ, ಆದರೆ ಮೊದಲನೇ ವೈದ್ಯರನ್ನು ಅಪಮಾನ ಮಾಡಬೇಡಿ.

ವೈದ್ಯ-ರೋಗಿ ಸಂಬಂಧ ನಿಂತಿರುವುದು “ನಂಬಿಕೆ” ಎಂಬ ಕಂಬದ ಮೇಲೆ. ಈ ಕಂಬಕ್ಕೆ ಗೆದ್ದಲು ಹಿಡಿದರೆ ಇಡೀ ಆರೋಗ್ಯ ವ್ಯವಸ್ಥೆ ಕುಸಿಯುತ್ತದೆ. ಆ ಕಂಬವನ್ನು ಗಟ್ಟಿ ಮಾಡುವ ಜವಾಬ್ದಾರಿ ವೈದ್ಯರ ಮೇಲೂ ಇದೆ, ನಮ್ಮ ಮೇಲೂ ಇದೆ.

*ಭವಿಷ್ಯದ ಆರೋಗ್ಯ ಲೋಕ: ಕೈಯಲ್ಲಿ ಮೊಬೈಲ್, ಮೈಯಲ್ಲಿ ಸೆನ್ಸಾರ್, ಮನಸ್ಸಿನಲ್ಲಿ ಮಾನವೀಯತೆ*

ಮುಂದಿನ ಇಪ್ಪತ್ತು ವರ್ಷದಲ್ಲಿ ವೈದ್ಯ ಲೋಕ ಹೇಗಿರಬಹುದು? ಕಲ್ಪನೆ ಮಾಡೋಣ. ನಿಮ್ಮ ಕೈಗಡಿಯಾರವೇ ನಿಮ್ಮ ಡಾಕ್ಟರ್ ಆಗುತ್ತದೆ. ಅದು ನಿಮ್ಮ ಹೃದಯ ಬಡಿತ, ಸಕ್ಕರೆ ಮಟ್ಟ, ನಿದ್ದೆಯ ಗುಣಮಟ್ಟ ಎಲ್ಲವನ್ನೂ ನೋಡುತ್ತಿರುತ್ತದೆ. ಹೃದಯಾಘಾತ ಬರುವ ಒಂದು ಗಂಟೆ ಮೊದಲೇ ಅದು ನಿಮಗೆ, ನಿಮ್ಮ ಮನೆ ವೈದ್ಯರಿಗೆ, ಹತ್ತಿರದ ಆಂಬುಲೆನ್ಸ್‌ಗೆ ಸಂದೇಶ ಕಳಿಸುತ್ತದೆ.
ಹಳ್ಳಿಯ ಆರೋಗ್ಯ ಕೇಂದ್ರದಲ್ಲಿ ಒಂದು ರೋಬೋಟ್ ಇರುತ್ತದೆ. ಬೆಂಗಳೂರಿನಲ್ಲಿ ಕುಳಿತ ಸರ್ಜನ್ ವಿಡಿಯೋ ಗೇಮ್ ಆಡುವಂತೆ ಆ ರೋಬೋಟ್ ಕೈಯನ್ನು ಆಡಿಸಿ, ಹಳ್ಳಿಯ ರೋಗಿಗೆ ಕೀಹೋಲ್ ಸರ್ಜರಿ ಮಾಡುತ್ತಾನೆ. ಇದಕ್ಕೆ “ರಿಮೋಟ್ ಸರ್ಜರಿ” ಎನ್ನುತ್ತಾರೆ. ಈಗಾಗಲೇ ಪ್ರಯೋಗ ಶುರುವಾಗಿದೆ.

“ಕೃತಕ ಬುದ್ಧಿಮತ್ತೆ” ಅಂದರೆ AI, ವೈದ್ಯರ ದೊಡ್ಡ ಸಹಾಯಕವಾಗುತ್ತದೆ. ನೀವು ಕೆಮ್ಮು, ಜ್ವರ ಎಂದು ಹೇಳಿದರೆ, AI ಲಕ್ಷಾಂತರ ರೋಗಿಗಳ ಡೇಟಾ ನೋಡಿ “ಇದು ಸಾಮಾನ್ಯ ಜ್ವರವೋ, ಡೆಂಗ್ಯೂವೋ, ಕೋವಿಡ್‌ನ ಹೊಸ ತಳಿಯೋ” ಎಂದು ಸೆಕೆಂಡ್‌ನಲ್ಲಿ ಹೇಳುತ್ತದೆ. ಕ್ಯಾನ್ಸರ್‌ನ ಸಣ್ಣ ಗಂಟನ್ನು ಸ್ಕ್ಯಾನ್‌ನಲ್ಲಿ ಮನುಷ್ಯನ ಕಣ್ಣು ತಪ್ಪಿಸಬಹುದು, ಆದರೆ AI ತಪ್ಪಿಸುವುದಿಲ್ಲ.

ಜೀನ್ ಎಡಿಟಿಂಗ್ ಎಂಬ ತಂತ್ರಜ್ಞಾನದಿಂದ ಹುಟ್ಟುವ ಮೊದಲೇ ಮಗುವಿಗೆ ಬರಬಹುದಾದ ಕಾಯಿಲೆಯನ್ನು ಸರಿಪಡಿಸಬಹುದು. “ಡಿಸೈನರ್ ಬೇಬಿ” ಎಂಬ ಕಲ್ಪನೆ ನಿಜವಾಗಬಹುದು.

ಇದನ್ನೆಲ್ಲ ಕೇಳಿದರೆ ಭಯವೂ ಆಗುತ್ತದೆ, ಹೆಮ್ಮೆಯೂ ಆಗುತ್ತದೆ. ಆದರೆ ಒಂದು ಪ್ರಶ್ನೆ. ರೋಬೋಟ್ ಆಪರೇಷನ್ ಮಾಡಬಹುದು. ಆದರೆ ಆಪರೇಷನ್ ಆದ ನಂತರ ರೋಗಿ “ಅಮ್ಮಾ” ಎಂದು ಕಣ್ಣು ತೆರೆದಾಗ, ಅವನ ತಲೆ ಸವರಿ “ಎಲ್ಲ ಸರಿ ಹೋಯಿತು ಮಗನೇ” ಎಂದು ಯಾರು ಹೇಳುತ್ತಾರೆ? AI ರೋಗ ಕಂಡುಹಿಡಿಯಬಹುದು. ಆದರೆ “ನಿನಗೆ ಕ್ಯಾನ್ಸರ್ ಇದೆ” ಎಂಬ ಸುದ್ದಿಯನ್ನು ರೋಗಿಯ ಕೈ ಹಿಡಿದು, ಕಣ್ಣಲ್ಲಿ ಕಣ್ಣಿಟ್ಟು, ಧೈರ್ಯ ತುಂಬಿ ಯಾರು ಹೇಳುತ್ತಾರೆ?

ಯಂತ್ರಕ್ಕೆ ಕರುಣೆ ಇಲ್ಲ, ದುಃಖ ಇಲ್ಲ, ಪ್ರೀತಿ ಇಲ್ಲ. ಅದು ಡೇಟಾ ನೋಡುತ್ತದೆ, ಮನುಷ್ಯನ ಮನಸ್ಸನ್ನು ನೋಡುವುದಿಲ್ಲ. ಹಾಗಾಗಿ ಭವಿಷ್ಯದ ವೈದ್ಯ “ಡಬಲ್ ರೋಲ್” ಮಾಡಬೇಕು. ಅವನು ಅರ್ಧ ಇಂಜಿನಿಯರ್ ಆಗಬೇಕು, ತಂತ್ರಜ್ಞಾನ ಬಳಸಲು ಗೊತ್ತಿರಬೇಕು. ಮತ್ತರ್ಧ ತಾಯಿ ಆಗಬೇಕು, ರೋಗಿಯ ನೋವನ್ನು ಅರ್ಥ ಮಾಡಿಕೊಳ್ಳಬೇಕು.

*ಕೊನೆಯ ನುಡಿ: ನಮನ ಮತ್ತು ಪ್ರತಿಜ್ಞೆ*

ವಿಶ್ವ ವೈದ್ಯರ ದಿನಾಚರಣೆ ಕೇವಲ ಒಂದು ದಿನದ ಆಚರಣೆ ಅಲ್ಲ. ಅದು 365 ದಿನ ನೆನಪಿಟ್ಟುಕೊಳ್ಳಬೇಕಾದ ಕೃತಜ್ಞತೆ. ಕೋವಿಡ್ ಸಮಯದಲ್ಲಿ ತಮ್ಮ ಜೀವದ ಹಂಗು ತೊರೆದು ದುಡಿದ ಲಕ್ಷಾಂತರ ವೈದ್ಯರು, ನರ್ಸ್‌ಗಳು, ಆಶಾ ಕಾರ್ಯಕರ್ತೆಯರು, ಲ್ಯಾಬ್ ಟೆಕ್ನೀಷಿಯನ್‌ಗಳು, ಆಂಬುಲೆನ್ಸ್ ಡ್ರೈವರ್‌ಗಳು – ಇವರೆಲ್ಲರ ತ್ಯಾಗಕ್ಕೆ ನಾವು ಚಿರಋಣಿ.

ಈ ದಿನ ನಾವು ಮೂರು ಪ್ರತಿಜ್ಞೆ ಮಾಡೋಣ.
ಒಂದು: ವೈದ್ಯರನ್ನು ಗೌರವಿಸೋಣ. ಅವರ ಮೇಲೆ ಕೈ ಮಾಡುವುದು, ಬೈಯುವುದು ನಿಲ್ಲಿಸೋಣ. ಅವರಿಗೂ ಕುಟುಂಬ ಇದೆ, ಭಾವನೆ ಇದೆ ಎಂಬುದನ್ನು ನೆನಪಿಡೋಣ.
ಎರಡು: ನಮ್ಮ ಆರೋಗ್ಯದ ಮೊದಲ ಜವಾಬ್ದಾರಿ ನಮ್ಮದು. “ಎಲ್ಲಾ ಡಾಕ್ಟರ್ ನೋಡಿಕೊಳ್ಳುತ್ತಾನೆ” ಎಂದು ಬೇಜವಾಬ್ದಾರಿಯಿಂದ ತಿನ್ನುವುದು, ಕುಡಿಯುವುದು, ಮಲಗುವುದು ಬೇಡ. ದಿನಾ ಅರ್ಧ ಗಂಟೆ ನಡೆಯೋಣ, ಹಸಿರು ತರಕಾರಿ ತಿನ್ನೋಣ, ಹೊತ್ತು ಮೀರಿ ಮೊಬೈಲ್ ನೋಡುವುದು ಬಿಡೋಣ. “ಮುಂಜಾಗ್ರತೆ” ಎಂಬುದು ಅತ್ಯುತ್ತಮ ಔಷಧ.
ಮೂರು: ಸರ್ಕಾರಿ ಆಸ್ಪತ್ರೆಗಳನ್ನು, ಸರ್ಕಾರಿ ವೈದ್ಯರನ್ನು ನಂಬೋಣ, ಬೆಳೆಸೋಣ. ಅವುಗಳಲ್ಲಿ ಸೌಲಭ್ಯ ಹೆಚ್ಚಿಸಲು ಸರ್ಕಾರವನ್ನು ಕೇಳೋಣ. ಆರೋಗ್ಯ ಎಂಬುದು ಶ್ರೀಮಂತರ ಸೊತ್ತು ಆಗಬಾರದು, ಅದು ಎಲ್ಲರ ಹಕ್ಕು ಆಗಬೇಕು.

ಡಾ. ಬಿ.ಸಿ. ರಾಯ್ ಅವರು ಒಂದು ಮಾತು ಹೇಳಿದ್ದರು – “Treat the patient, not the disease”. ರೋಗಕ್ಕೆ ಚಿಕಿತ್ಸೆ ಕೊಡಬೇಡಿ, ರೋಗಿಗೆ ಚಿಕಿತ್ಸೆ ಕೊಡಿ. ರೋಗಿಯ ಹೆಸರು, ಅವನ ಮನೆಯ ಕಥೆ, ಅವನ ಭಯ, ಅವನ ಕನಸು – ಎಲ್ಲವನ್ನೂ ಅರ್ಥ ಮಾಡಿಕೊಂಡು ಚಿಕಿತ್ಸೆ ಕೊಡಿ. ಈ ಮಾತು ಪ್ರತಿ ವೈದ್ಯನ ಮನಸ್ಸಿನಲ್ಲಿ, ಪ್ರತಿ ರೋಗಿಯ ನಂಬಿಕೆಯಲ್ಲಿ ಜೀವಂತವಾಗಿರಲಿ.

ಬಿಳಿ ಕೋಟು ತೊಟ್ಟ ಪ್ರತಿಯೊಬ್ಬ ದೇವರಿಗೆ, ನಿಸ್ವಾರ್ಥ ಸೇವೆ ಮಾಡುವ ಪ್ರತಿ ನರ್ಸ್ ತಾಯಿಗೆ, ಹಳ್ಳಿಹಳ್ಳಿಗೆ ಸೈಕಲ್ ತುಳಿದು ಹೋಗುವ ಪ್ರತಿ ಆಶಾ ಅಕ್ಕನಿಗೆ – ನಿಮಗೆ ನಮ್ಮ ಅನಂತ ನಮನಗಳು. ನೀವು ಇರುವವರೆಗೆ ನಮಗೆ ರೋಗದ ಭಯವಿಲ್ಲ, ಸಾವಿನ ಭಯವಿಲ್ಲ. ನೀವು ನಮ್ಮ ಬದುಕಿನ ಆಧಾರ ಸ್ತಂಭಗಳು.

ಶಿಶು ವೈದ್ಯರು, ಪಶು ವೈದ್ಯರು, ಸಕಲ ವೈದ್ಯ ಸಮೂಹಕ್ಕೆ ಶುಭಾಶಯಗಳು.

ವೈದ್ಯೋ ನಾರಾಯಣೋ ಹರಿ.

*ಉಮೇಶ್ ಬಾಬು ಮಠದ್ [ಉಬಾಮ]*
ಕನಕ ಯುವ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ಸಾಮಾಜಿಕ ಚಿಂತಕರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *