;

ಗೌರಿ ಗಣೇಶ ಹಬ್ಬವನ್ನು ಪರಿಸರಕ್ಕೆ ಪೂರಕವಾಗಿ ಆಚರಿಸಿ: ಗೀತಾ…!!!

ಗೌರಿ ಗಣೇಶ ಹಬ್ಬವನ್ನು ಪರಿಸರಕ್ಕೆ ಪೂರಕವಾಗಿ ಆಚರಿಸಿ: ಗೀತಾ

ಸುಂದರವಾದ ಹಬ್ಬವನ್ನು ಆಚರಿಸಬೇಕೆಂದರೆ ನಮ್ಮ ಸುತ್ತಲಿನ ಪರಿಸರ ಸುಂದರವಾಗಿರಬೇಕು. ಈ ಬಾರಿ ಗೌರಿ ಗಣೇಶ ಹಬ್ಬವನ್ನು ಪರಿಸರಕ್ಕೆ ಪೂರಕವಾಗಿ ಆಚರಿಸೋಣ ಎಂದು ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಗೀತಾ ಅವರು ಕರೆ ನೀಡಿದರು.

ಶುಕ್ರವಾರ ನಗರದ ಮಹಿಳಾ ಸರ್ಕಾರಿ ಕಾಲೇಜಿನ (ಸ್ವಯತ್ತ) ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರದೇಶಿಕ ಕಚೇರಿ, ಮಹಿಳಾ ಸರ್ಕಾರಿ ಕಾಲೇಜು (ಸ್ವಯತ್ತ), ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಮತ್ತು ಇಕೋ ಕ್ಲಬ್, ಪರಿಸರ ರೂರಲ್ ಡೆವಲಪ್ ಮೆಂಟ್ ಸೊಸೈಟಿ (ರಿ) ಮಂಗಲ, ಮಂಡ್ಯ ಜಿಲ್ಲಾ ಕುಂಬಾರರ ಜಾಗೃತಿ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ “ಪರಿಸರಸ್ನೇಹಿ ಮಣ್ಣಿನ ಗಣಪತಿ ಮೂರ್ತಿ ಕುರಿತು ಪ್ರಾತ್ಯಕ್ಷಿಕೆ” ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪಿ.ಓ.ಪಿ. ಪ್ಲಾಸ್ಟರ್ ಆಫ್ ಪ್ಯಾರಿಸ್ ನಲ್ಲಿ ಮಾಡಿದ ಗಣೇಶ ವಿಗ್ರಹಗಳ ಜಲ ಮೂಲಗಳಲ್ಲಿ ವಿಸರ್ಜನೆ ಮಾಡುವುದರಿಂದ ಜಲ ಮಾಲಿನ್ಯ ಉಂಟಾಗುತ್ತದೆ. ಆದ್ದರಿಂದ ಇನ್ನು ಮುಂದೆ ಪರಿಸರಕ್ಕೆ ಹಾನಿ ಮಾಡದ ಜೇಡಿ ಮಣ್ಣಿನಿಂದ ತಯಾರಿಸಲಾದ ಗಣೇಶ ವಿಗ್ರಹಗಳನ್ನು ಮಾತ್ರ ಪ್ರತಿಷ್ಠಾಪಿಸಿ ವಿಸರ್ಜನೆ ಮಾಡುವ ಮೂಲಕ ಪರಿಸರವನ್ನು ಸಂರಕ್ಷಣೆ ಮಾಡೋಣ ಎಂದು ಕರೆ ನೀಡಿದರು.

ನಮ್ಮ ಪರಿಸರದ ಮೇಲೆ ಅನೇಕ ರೀತಿಯಲ್ಲಿ ಮಾಲಿನ್ಯದಿಂದ ದಾಳಿಯಾಗುತ್ತಿದೆ. ಯುವ ಜನತೆ ಇದರ ಕುರಿತಾಗಿ ಹೆಚ್ಚಿನ ಗಮನ ಹರಿಸಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಬೇಕು ಹಾಗೂ ನಿಮ್ಮ ಸುತ್ತಲಿನವರಿಗೆ ಪರಿಸರ ಸಂರಕ್ಷಣೆ ಕುರಿತಾಗಿ ಜಾಗೃತಿ ಮೂಡಿಸಿ ಎಂದು ಹೇಳಿದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಸಂದೇಶ್ ಮಾತನಾಡಿ ಪರಿಸರದ ಜೊತೆಗೆ ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳನ್ನು ಸಂರಕ್ಷಣೆ ಮಾಡಬೇಕಿದೆ. ಭಾರತೀಯರಾದ ನಾವು ಎಲ್ಲರನ್ನೂ ಸಮಾನವಾಗಿ ನೋಡುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಎಲ್ಲರೊಂದಿಗೆ ಜೊತೆಯಾಗಿ ಎಲ್ಲರೊಡನೆ ಪ್ರೀತಿಯಿಂದ ಇರುವುದೇ ಹಬ್ಬ. ಗೌರಿ-ಗಣೇಶ ಹಬ್ಬವನ್ನು ಸಹ ಎಲ್ಲರೊಡನೆ ಸಮಾನವಾಗಿ ಸಮಾರಸ್ಯದಿಂದ ಆಚರಿಸೋಣ ಎಂದು ಕರೆ ನೀಡಿದರು.

ಮಹಿಳಾ ಸರ್ಕಾರಿ ಕಾಲೇಜಿನ (ಸ್ವಯತ್ತ) ಪ್ರಾಂಶುಪಾಲರಾದ ಡಾ. ಗುರುರಾಜ್ ಪ್ರಭು ಅವರು ಮಾತನಾಡಿ ಮನುಷ್ಯ ಮತ್ತು ಪ್ರಕೃತಿಯ ನಡುವೆ ಒಂದು ನಿಕಟವಾದ ಸಂಬಂಧವಿದೆ. ಆಧುನಿಕ ಕಾಲಘಟ್ಟದಲ್ಲಿ ನಮಗೆ ತಿಳಿದೋ ತಿಳಿಯದೆಯೋ ನಾವು ಪ್ರಕೃತಿಯನ್ನು ನಾಶ ಮಾಡುತ್ತಿದ್ದೇವೆ. ಹಬ್ಬಗಳ ಆಚರಣೆಯಲ್ಲೂ ಸಹ ಪಟಾಕಿ ಸಿಡಿಸುವುದು, ರಾಸಾಯನಿಕ ಗುಣಗಳುಳ್ಳ ದೇವರ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜನೆ ಮಾಡುವ ಮೂಲಕ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ಪರಿಸರ ರೂರಲ್ ಡೆವಲಪ್ ಮೆಂಟ್ ಸೊಸೈಟಿಯ ಮಂಗಲ ಯೋಗೇಶ್ ಅವರು ಮಾತನಾಡಿ ಜನ ಸಂಖ್ಯೆ ಹೆಚ್ಚಳವಾದಂತೆ ಪ್ರಕೃತಿ ಮಾಲಿನ್ಯ ಹೆಚ್ಚಾಗುತ್ತಿದೆ. ನಾವು ಎಷ್ಟೇ ಪ್ರಜ್ಞಾವಂತರಾದರು ಸಹ ಪರಿಸರದ ಮೇಲೆ ಎಲ್ಲೆ ಮೀರಿದ ಹಲ್ಲೆ ನಡೆಯುತ್ತಿದೆ. ಪರಿಸರದ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಯುವ ಜನತೆ ಸಹಕಾರ ಅತಿ ಮುಖ್ಯ ಎಂದು ಹೇಳಿದರು.

ರಾಸಾಯನಿಕ ಲೇಪಿತ ವಿಗ್ರಹಗಳನ್ನು ಕೆರೆ ಕಟ್ಟೆಗಳಲ್ಲಿ ವಿಸರ್ಜನೆ ಮಾಡುವುದರಿಂದ ಜಲ ಮಾಲಿನ್ಯ ಉಂಟಾಗುತ್ತಿದೆ ಇದರಿಂದ ಸಾಂಕ್ರಾಮಿಕ ರೋಗಗಳು ಸಹ ಹೆಚ್ಚಳವಾಗುತ್ತಿವೆ. ಆದ್ದರಿಂದ ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಹೆಚ್ಚಾಗಿ ಬಳಸಬೇಕು. ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ಜಾಗೃತಿ ಮೂಡಿಸಬೇಕು ಎಂದರು.

ನಂತರ ವಿದ್ಯಾರ್ಥಿಗಳಿಗೆ ಮಣ್ಣಿನಿಂದ ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ತಯಾರಿಸುವ ವಿಧಾನವನ್ನು ಜಿಲ್ಲಾ ಕುಂಬಾರರ ಜಾಗೃತಿ ವೇದಿಕೆ ವತಿಯಿಂದ ತೋರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಉಪ ಪರಿಸರ ಅಧಿಕಾರಿ ಭವ್ಯ, ಜಿಲ್ಲಾ ಕುಂಬಾರರ ಜಾಗೃತಿ ವೇದಿಕೆ ಅಧ್ಯಕ್ಷ ಕೃಷ್ಣ, ಮಹಿಳಾ ಸರ್ಕಾರಿ ಕಾಲೇಜಿನ (ಸ್ವಯತ್ತ) ಎನ್ ಎಸ್ ಎಸ್ ಘಟಕದ ಅಧಿಕಾರಿ ಅಶೋಕ್, ಚಂದ್ರು, ವೆಂಕಟೇಶ್, ಶಿವಲಿಂಗು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;