ಯಾವ ಸರ್ಕಾರವಿದ್ರೂ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ..
ಬಾಂಬೆ, ಡೆಲ್ಲಿ, ನಾಗಪುರ ವಿಶ್ವವಿದ್ಯಾನಿಲಯದ ಕುಲಪತಿಗಳು ನನ್ನ ಅಭಿವೃದ್ದಿ ಕೆಲಸಗಳನ್ನು ನೋಡಿ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಿದ ಪರಿಣಾಮ ಕುವೆಂಪು ವಿಶ್ವವಿದ್ಯಾನಿಲಯ ರಾಜ್ಯಪಾಲರ ಕೈಯಿಂದ ನನಗೆ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ಈ ಪದವಿಯನ್ನು ಕ್ಷೇತ್ರದ ಜನರಿಗೆ ಸಮರ್ಪಿಸುವುದಾಗಿ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ತಾಲೂಕಿನ ರಾಮಗಿರಿ ಹೋಬಳಿಯ ದೊಗ್ಗನಾಳ್ ಗ್ರಾಮದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ದೊಗ್ಗನಾಳ್ ಮತ್ತು ನುಲೇನೂರು ಗ್ರಾಮಗಳ ನಡುವೆ ಡಾಂಬರ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸರಕಾರ ಯಾವುದೇ ಇರಲಿ ಅನುದಾನ ಹೇಗೆ ತರಬೇಕೆಂಬುದು ಗೊತ್ತಿದೆ. ರಂಗಾಪುರದಿಂದ ಮಲ್ಲಾಡಿಹಳ್ಳಿ ರಸ್ತೆಗೆ ಒಂದು ಕೋಟಿ ರೂ. ಗಳನ್ನು ನೀಡಿದ್ದೇನೆ. ಇನ್ನು ಐದು ವರ್ಷಗಳಲ್ಲಿ ಹಂತ ಹಂತವಾಗಿ ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳಲಾಗುವುದು.

ತಾಲೂಕಿನ ಬೊಮ್ಮನಕಟ್ಟೆ, ಬಿ.ದುರ್ಗ ಹಾಗೂ ಹೊಳಲ್ಕೆರೆ ಪಟ್ಟಣದ ಬಳಿ ಗುಡ್ಡಗಳನ್ನು ಆಯ್ಕೆ ಮಾಡಿಕೊಂಡು ಸ್ವಚ್ಚಂದ ಪರಿಸರದಲ್ಲಿ ವಸತಿ ಶಾಲೆ, ಕಾಲೇಜುಗಳನ್ನು ನಿರ್ಮಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿದ್ದೇನೆ. ಎಂ.ಎಂ. ಸರಕಾರಿ ಪ್ರೌಢಶಾಲೆಗೆ ಸ್ವಂತ ಹಣದಿಂದ ಬಸ್ ನೀಡಿದ್ದೇನೆ. ಕಂಪ್ಯೂಟರ್, ಸುಸಜ್ಜಿತವಾದ ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್ಗಳನ್ನಾಗಿ ಮಾಡಿದ್ದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಚಿತ್ರಹಳ್ಳಿ, ಭರಮಸಾಗರ ಭಾಗದ ಸರಕಾರಿ ಶಾಲೆಗಳಿಗೆ ಉಚಿತ ಬಸ್ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು.
ಜೆ.ಎಚ್.ಪಟೇಲ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಆರ್ಥಿಕ ತಜ್ಞ ಡಾ.ನಂಜುಂಡಪ್ಪನವರ ಆಯೋಗ ರಚಿಸಿ ರಾಜ್ಯದ ಎಲ್ಲಾ ಕ್ಷೇತ್ರಗಳ ಅಭಿವೃದ್ದಿಗೆ ಸಂಬಂಧಿಸಿದಂತೆ ವರದಿ ನೀಡುವಂತೆ ಸೂಚಿಸಿತ್ತು. ಅದರಂತೆ ಅವರು ನೀಡಿದ ವರದಿಯನ್ವಯ ಪ್ರತಿ ವರ್ಷ ನಾಲ್ಕು ಸಾವಿರ ಕೋಟಿ ರೂ.ಗಳನ್ನು ಅಭಿವೃದ್ದಿಗೆ ಮುಡುಪಾಗಿಡುವ ಕೆಲಸ ಮಾಡಲಾಗಿದೆ. ಹೀಗಾಗಿ ಸರಕಾರದಿಂದ ಅನುದಾನ ತರುವುದು ನನಗೆ ಕಷ್ಟವೇನಲ್ಲ ಎಂದರು.
ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ ನಾಗರಾಜ್, ಸದಸ್ಯರಾದ ಆಶಾ ಪ್ರಕಾಶ್, ಮಹೇಶಣ್ಣ, ಕೃಷ್ಣಮೂರ್ತಿ, ರುದ್ರಪ್ಪ, ರಮೇಶ್ ಗೌಡ್ರು, ಗ್ರಾಮದ ಮುಖಂಡರು ಇತರರು ಇದ್ದರು…

ವರದಿ. ಸುರೇಶ್ ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
