ಜಿಲ್ಲಾಧಿಕಾರಿ ಆರ್.ಲತಾ ಅವರಿಂದ 10 ಕ್ಷಯ ರೋಗಿಗಳ ದತ್ತು ಸ್ವೀಕಾರ
ಬೆಂಗಳೂರು ಗ್ರಾಮಾಂತರ ಜಿಲ್ಲೆ, : ಕ್ಷಯ ರೋಗವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯು ಮುಂದಾಗುತ್ತಿದ್ದು, ಜಿಲ್ಲೆಯಲ್ಲಿರುವ ಕ್ಷಯ ರೋಗಿಗಳನ್ನು ಅಧಿಕಾರಿಗಳು, ಸಿಬ್ಬಂದಿಗಳು, ಸ್ವಯಂ ಸೇವಾ ಕಾರ್ಯಕರ್ತರು ಹಾಗೂ ಸಾರ್ವಜನಿಕರು ದತ್ತು ತೆಗೆದುಕೊಂಡು ಅವರಿಗೆ ಅಗತ್ಯ ಔಷಧಿ ಮತ್ತು ಪೌಷ್ಠಿಕ ಆಹಾರದ ಕಿಟ್‌ಗಳನ್ನು ನೀಡಲು ನೆರವಾಗುವ ಮೂಲಕ ಕ್ಷಯ ರೋಗ ಮುಕ್ತ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಮಟ್ಟದ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮದ “ಜಿಲ್ಲಾ ಮಟ್ಟದ ಕ್ಷಯ ರೋಗ ವೇದಿಕೆ” ಸಭೆಯನ್ನು ಹಾಗೂ “ಜಿಲ್ಲಾ ಮಟ್ಟದ ಟಿ.ಬಿ ಕೋರ್ಮೊಬಿಟಿಯ ಸಮಿತಿ” ಸಭೆಯ ಅಧ್ಯಕ್ಷತೆ ವಹಿಸಿ, 10 ಕ್ಷಯ ರೋಗಿಗಳ ದತ್ತು ಸ್ವೀಕಾರ ಮಾಡಿ, ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರಗಳ ಕಿಟ್ ವಿತರಿಸಿ ಅವರು ಮಾತನಾಡಿದರು.

ಕ್ಷಯರೋಗ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರೋಗ್ಯ ಇಲಾಖೆಯ ಮೂಲಕ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ 2025ರ ವೇಳೆ ಕ್ಷಯ ರೋಗ ಮುಕ್ತ ಭಾರತ ನಿರ್ಮಾಣ ಗುರಿಯನ್ನು ಹೊಂದಲಾಗಿದೆ ಹೇಳಿದರು. ಸಾರ್ವಜನಿಕರು ಕ್ಷಯದ ರೋಗದ ಲಕ್ಷಣ ಕುರಿತು ನಿರ್ಲಕ್ಷ್ಯ ಧೋರಣೆ ಅನುಸರಿಸಬಾರದು. ಕ್ಷಯ ರೋಗವು 15 ವರ್ಷದ ಮಕ್ಕಳಿಂದ 45 ವರ್ಷದೊಳಗಿನ ಜನರಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿದೆ. ಕ್ಷಯ ರೋಗಿಗಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದು, ಪೋಷಣ್ ಅಭಿಯಾನದಡಿ ಮಾಸಿಕ ಗೌರವಧನ ನೀಡುತ್ತಿದ್ದು, ಅದನ್ನು ಪೌಷ್ಠಿಕ ಆಹಾರದ ಸೇವನೆಗೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು..
ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕ್ಷಯ ರೋಗಿಗಳನ್ನು ದತ್ತು ಪಡೆದ ಅಸಂಘಟಿತ ಕಾರ್ಮಿಕರ ಜಿಲ್ಲಾ ಉಪಾಧ್ಯಕ್ಷೆ ನಾಗಲಕ್ಷ್ಮೀ ಮತ್ತು ಕ್ಷಯ ರೋಗದಿಂದ ಗುಣಮುಖರಾಗಿ ಜಿಲ್ಲೆಯ ಕ್ಷಯ ರೋಗಿಗಳನ್ನು ದತ್ತು ಪಡೆದ ಮುತ್ತುರಾಜ್ ಅವರನ್ನು ಜಿಲ್ಲಾಧಿಕಾರಿ ಅವರು ಸನ್ಮಾನಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಿ.ಕೆ.ವಿಜಯೇಂದ್ರ, ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ವಿಠಲ್ ಕಾವಲೇ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ. ನಾಗೇಶ್.ಎಸ್, ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರರು ಡಾಕ್ಟರ್ ಶಾಜಿಯಾ ಅಂಜುಮ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಕ್ಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು…

ವರದಿ.ಕಲಾವತಿ, ಎನ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
