ಇಟ್ಟಿಗಿ ರೈತ ಸಂಪರ್ಕ ಕೇಂದ್ರದಲ್ಲಿ ಬೀಜೋಪಚಾರ ಆಂದೋಲನದ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿಯ ರೈತ ಸಂಪರ್ಕ ಕೇಂದ್ರದಲ್ಲಿ 2022-23 ಸಾಲಿನ ಬೀಜೋಪಚಾರ ಆಂದೋಲನ ಕಾರ್ಯಕ್ರಮ ದಿನಾಂಕ1/6/2022ರಂದು ನಡೆಯಿತು. ರೈತರಿಗೆ ವಿಷೇಶ ಉಪನ್ಯಾಸ ನೀಡಿದ ಡಾ|| ಸಿಎಂ ಕಾಲಿಬಾವಿ ಸರ್ ಬೀಜದಂತೆ ಬೆಳೆ. ಆದ್ದರಿಂದ ಬೆಳೆ ಬೆಳೆಯಬೇಕಾದರೆ ಬೀಜ ಮತ್ತು ಅದಕ್ಕೆ ಮಾಡುವ ಉಪಚಾರ ಮುಖ್ಯ. ಬೀಜೋಪಚಾರ ಎಂದರೆ ಬೀಜಕ್ಕೆ ಮಾಡುವ ಉಪಚಾರ. ಆ ಮೂಲಕ ಬೀಜ ಹಾಗೂ ಸಸಿಯ ಸಂರಕ್ಷಣೆ ಮಾಡುವುದು ಅಥವಾ ಅದಕ್ಕೆ ಅಧಿಕ ಪೋಷಕಾಂಶ ಒದಗಿಸುವ ಕ್ರಿಯೆ.
ಮುಂಗಾರಿನಲ್ಲಿ ಕೈಗೊಳ್ಳುವ ಬಿತ್ತನೆ ಕಾರ್ಯಕ್ಕೆ ಮುಖ್ಯವಾಗಿ ಕೃಷಿಯಲ್ಲಿ ಒತ್ತು ನೀಡಬೇಕಾಗಿರುವ ಕಚ್ಚಾವಸ್ತು ಬೀಜ. ಬೀಜದ ಆಯ್ಕೆಯಲ್ಲಿ ಗಮನಿಸಬೇಕಾದ ವಿಷಯಗಳೆಂದರೆ, ಆಯಾ ಪ್ರದೇಶದಲ್ಲಿ ಬೆಳೆಯುವ ಬೆಳೆಯ ಸೂಕ್ತ ತಳಿಯ ಆಯ್ಕೆ, ಉತ್ತಮ ಗುಣಮಟ್ಟದ ದೃಢೀಕೃತ ಬೀಜಗಳ ಬಳಕೆ. ಬೀಜೋಪಚಾರವನ್ನು ಮಣ್ಣಿನ ಮಡಿಕೆ ಅಥವಾ ಪ್ಲಾಸ್ಟಿಕ್ ಚೀಲ ಇಲ್ಲವೆ ಪಾತ್ರೆಯಲ್ಲಿ ಮಾಡಬಹುದು.
ಮೂರು ವಿಧಾನಗಳಲ್ಲಿ ಈ ಉಪಚಾರ ಮಾಡಲು ಸಾಧ್ಯ. ಮೊದಲನೆಯದಾಗಿ ಬೀಜವನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ತೆಗೆದುಕೊಂಡು ಪೋಷಕಾಂಶವನ್ನು ತಕ್ಕ ಪ್ರಮಾಣದಲ್ಲಿ ಬೀಜದ ಮೇಲೆ ಉದುರಿಸಿ, ನಂತರ ಸ್ವಲ್ಪ ನೀರು ಚಿಮುಕಿಸಿ, ಮಿಶ್ರಣ ಮಾಡಿ, ನೆರಳಲ್ಲಿ ಒಣಗಿಸಿ ಬಿತ್ತನೆ ಮಾಡುವುದು.
ಎರಡನೆಯದಾಗಿ ಬೀಜವನ್ನು ಪ್ಲಾಸ್ಟಿಕ್ ಚೀಲದಲ್ಲಿ ತೆಗೆದುಕೊಂಡು ಅದಕ್ಕೆ ಪೋಷಕಾಂಶ ಹಾಕಿ, ನೀರು ಚಿಮುಕಿಸಿ, ಬ್ಯಾಗನ್ನು ಬಲೂನಿನಂತೆ ಊದಿ ಬ್ಯಾಗ್ನ ಬಾಯಿಯನ್ನು ರಬ್ಬರ್ ಬ್ಯಾಂಡ್ನಿಂದ ಗಟ್ಟಿಯಾಗಿ ಕಟ್ಟುವುದು. ನಂತರ ಅದನ್ನು ಮೆಲ್ಲನೆ ವೃತ್ತಾಕಾರದಲ್ಲಿ ತಿರುಗಿಸುತ್ತ ಮಿಶ್ರಣ ಮಾಡಿ, ಬ್ಯಾಗ್ನಿಂದ ತೆಗೆದು ನೆರಳಲ್ಲಿ ಒಣಗಿಸಿ ಬಿತ್ತನೆ ಮಾಡುವುದು.
ಮೂರನೆಯದಾಗಿ ಪೋಷಕಾಂಶ ಪೂರೈಸುವ ಜೀವಾಣುಗಳನ್ನು ಬೀಜಕ್ಕೆ ಅಂಟಿನ ಸಹಾಯದಿಂದ ಲೇಪನ ಮಾಡುವುದು. ಮೊದಲಿಗೆ ಬೆಲ್ಲ ಅಥವಾ ಸಕ್ಕರೆ ಪಾಕವನ್ನು ತೆಳುವಾಗಿ ತಯಾರಿಸಿ ತಣ್ಣಗಾದ ನಂತರ ಪೋಷಕಾಂಶದ ಪುಡಿ ಬೆರೆಸುವುದು. ಅದರಲ್ಲಿ ಬೀಜಮಿಶ್ರಣ ಮಾಡಿ,ನೆರಳಲ್ಲಿ ಒಣಗಿಸಿ ಬಿತ್ತನೆ ಮಾಡುವುದು.
ಯಾವುದೇ ಪದಾರ್ಥದ ಉಪಚಾರ ಮಾಡುವಾಗ ಅದರ ಸಮನಾದ ಲೇಪನ ಪ್ರತಿಯೊಂದು ಬೀಜಕ್ಕೆ ಆಗಬೇಕು. ದ್ರವರೂಪ ಅಥವಾ ಅಂತರವ್ಯಾಪಿ ರಾಸಾಯನಿಕ ಬಳಸಿದಾಗ ಬೀಜೋಪಚಾರದ ನಂತರ ರಾತ್ರಿ ನೆರಳಲ್ಲಿ ಒಣಗಿಸಬೇಕು.
ಎರಡನೇ ವಿಧಾನದ ಬೀಜೋಪಚಾರ ಸೂಕ್ಷ್ಮವಿರುವ ಬೀಜ ಅಂದರೆ, ಕಡಲೆಬೀಜ ಅಥವಾ ಆಗ ತಾನೆ ಮೊಳಕೆ ಒಡೆದ (ಕುಡಿ ಮೊಳಕೆ-ಭತ್ತ) ಬೀಜಕ್ಕೆ ಉತ್ತಮ. ಇದೇ ತತ್ವ ಬಳಸಿ ಮಿಶ್ರಣ ಯಂತ್ರ ಅಥವಾ ಡ್ರಮ್ ಸೀಡರ್ ಉಪಯೋಗಿಸಿ ಹೆಚ್ಚಿನ ಪ್ರಮಾಣದಲ್ಲಿ ಬೀಜೋಪಚಾರ ಮಾಡಬಹುದು.
ಬೀಜೋಪಚಾರ ಸಸ್ಯಗಳಲ್ಲಿ ಪ್ರತಿರೋಧಕ ಶಕ್ತಿ ಉತ್ಪನ್ನವಾಗಲು ಪ್ರೇರೇಪಿಸುವುದು, ಇದರಿಂದ ಪೀಡೆ ಸಮಸ್ಯೆ ಕಡಿಮೆ ಆಗುವುದು ಮತ್ತು ಅದರ ನಿವಾರಣೆಗೆ ರಾಸಾಯನಿಕ ಸಿಂಪಡಣೆಗೆ ವ್ಯಯಿಸುವ ಖರ್ಚನ್ನು ಕೂಡ ಗಮನಾರ್ಹವಾಗಿ ಕಡಿಮೆಗೊಳಿಸುವುದು. ಕೆಲವು ಜೀವಾಣುಗಳಲ್ಲಿ ಸುತ್ತಲಿನ ಪರಿಸರದಲ್ಲಿರುವ ಪೋಷಕಾಂಶವನ್ನು ಹಿಡಿದು ಗಿಡಗಳಿಗೆ ಒದಗಿಸುವ ಗುಣವಿರುವುದು.
ಇಂತಹ ಜೀವಾಣುಗಳನ್ನು ಬೀಜೋಪಚಾರಕ್ಕೆ ಬಳಸಿದರೆ ಹೆಚ್ಚುವರಿ ಪೋಷಕಾಂಶಗಳನ್ನು ಗಿಡಗಳಿಗೆ ಒದಗಿಸುವುದರ ಜೊತೆಗೆ ರಾಸಾಯನಿಕ ಗೊಬ್ಬರದ ಬಳಕೆ ಪ್ರಮಾಣವನ್ನು ಕಡಿತಗೊಳಿಸಬಹುದು. ಉಪಚಾರ ಮಾಡಿದ ಬೀಜವನ್ನು ಆಹಾರವಾಗಿ ಉಪಯೋಗಿಸಬಾರದು, ಪ್ರಾಣಿ-ಪಕ್ಷಿಗಳಿಗೂ ಅವು ಹಾನಿಕಾರಕ.
ಎನ್ನುವುದನ್ನು ಈ ದಿನದ ಕಾರ್ಯಕ್ರಮದಲ್ಲಿ ತಿಳಿಸುವುದರ ಮೂಲಕ ರೈತರಲ್ಲಿ ಜಾಗ್ರತೆ ಮೂಡಿಸಿದರು. ಸದರಿ ಕಾರ್ಯಕ್ರಮದಲ್ಲಿ ಡಾ|| ಸಿಎಂ ಕಾಲಿಬಾವಿ ಸರ್. ಕೊಟ್ರೇಶ್ ಗೋರಂಟಿ ಕೃಷಿ ಅಧಿಕಾರಿಗಳು, ಸೌಜನ್ಯ ಹಣ್ಣಿ ಸಹಾಯಕ ತಾಂತ್ರಿಕ ವ್ಯವಸ್ತಾಪಕರು, ಮೈನುದ್ದಿನ್ ಲೆಕ್ಕ ಸಹಾಯಕರು, ಚಂದ್ರಪ್ಪ ಅನುವುಗರ ಹಾಗೂ ವಿವಿಧ ಗ್ರಾಮದ ರೈತರು ಭಾಗವಹಿಸಿದ್ದರು.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
