ಕೋವಿಡ್ನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳೊಂದಿಗೆ ಪ್ರಧಾನಮಂತ್ರಿಗಳ ಸಂವಾದ:
ಮಕ್ಕಳೆ ಭಾರತಾಂಬೆ ನಿಮ್ಮೊಂದಿಗಿದ್ದಾಳೆ ಧೈರ್ಯದಿಂದಿರಿ ಎಂದ ನರೇಂದ್ರ ಮೋದಿ
ಕಲಬುರಗಿ, ಹೆತ್ತ ತಂದೆ-ತಾಯಿಗಳ ಪ್ರೀತಿ ಮತ್ತು ಕಾಳಜಿ ಯಾರಿಂದಲೂ ನೀಡಲು ಸಾಧ್ಯವಿಲ್ಲವಾದರೂ ತಾಯಿ ಭಾರತಾಂಬೆ ನಿಮ್ಮೊಂದಿಗಿದ್ದಾಳೆ. ಪಿ.ಎಂ. ಕೇರ್ ಯೋಜನೆ ಮೂಲಕ ನಿಮ್ಮ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮಕ್ಕಳನ್ನು ಉದ್ದೇಶಿಸಿ ಹೇಳಿದರು.
ಸೋಮವಾರ ಕೋವಿಡ್ನಿಂದ ತಂದೆ-ತಾಯಿಗಳನ್ನು ಕಳೆದುಕೊಂಡ 18 ವರ್ಷದೊಳಗಿನ ಮಕ್ಕಳೊಂದಿಗೆ ದೆಹಲಿನಿಂದ ವಿಡಿಯೋ ಕಾನ್ಪೆರೆನ್ಸ್ ಮೂಲಕ ಸಂವಾದ ನಡೆಸಿದರು. ಇತ್ತ ಕಲಬುರಗಿಯ ಜಿಲ್ಲಾ ಪಂಚಾಯತ ಕಚೇರಿಯಲ್ಲಿ ಸಂವಾದಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಸಂಕಷ್ಟದ ದಿನಗಳನ್ನು ಎದುರಿಸಿ ಬಂದಿರುವ ನಿಮ್ಮ ಧೈರ್ಯಕ್ಕೆ ನಾನು ಸೆಲ್ಯೂಟ್ ಹೊಡೆಯುವೆ ಎಂದ ನರೇಂದ್ರ ಮೋದಿ ನಿಮ್ಮ ಕನಸನ್ನು ಸಾಕಾರಗೊಳಿಸುವ ಪಿ.ಎಂ.ಕೇರ್ ಸಣ್ಣ ಪ್ರಯತ್ನವಾಗಿದೆ. ಇಡೀ ದೇಶ, ದೇಶದ ಸಂವೇದನೆ ನಿಮ್ಮೊಂದಿಗೆ ಎಂದು ಮಕ್ಕಳಿಗೆ ಅಭಯ ನೀಡಿದರು.
ಈಗಾಗಲೆ ಮಕ್ಕಳ ಮನೆ ಹತ್ತಿರವಿರುವ ಸರ್ಕಾರಿ ಅಥವಾ ಖಾಸಗಿ ಶಾಲೆಗೆ ಶಿಕ್ಷಣಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಶಿಕ್ಷಣಕ್ಕೆ ಬೇಕಾದ ಪುಸ್ತಕ, ಬಟ್ಟೆ ಇನ್ನಿತರ ಖರ್ಚು ಸಹ ಸರ್ಕಾರ ನೋಡಿಕೊಳ್ಳಲಿದೆ. ಉನ್ನತ ಶಿಕ್ಷಣದ ಜೊತೆಗೆ ಶೈಕ್ಷಣಿಕ ಸಾಲಕ್ಕೂ ಪಿ.ಎಂ.ಕೇರ್ ನೆರವಾಗಲಿದೆ. 5 ಲಕ್ಷ ರೂ. ವರೆಗಿನ ಉಚಿತ ಚಿಕಿತ್ಸೆಯ ಆಯೂಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ನೀಡಲಾಗುತ್ತಿದೆ. ಮಕ್ಕಳ ಹೆಸರ ಮೇಲೆ ಅಂಚೆ ಬ್ಯಾಂಕ್ನಲ್ಲಿ ಇಡಲಾಗುವ ಇಡಗಂಟಿನ ಮೇಲೆ ಲಭ್ಯವಾಗುವ ಬಡ್ಡಿಯನ್ನು 18 ರಿಂದ 23 ವಯಸ್ಸಿನ ಅವಧಿಯಲ್ಲಿ ಪ್ರತಿ ತಿಂಗಳ ಸ್ಟೇಫಂಡ್ ರೂಪದಲ್ಲಿ ಖರ್ಚಿಗೆ ಹಣ ನೀಡಲಾಗುವುದು. 23 ವರ್ಷದ ನಂತರ ಮುಂದಿನ ಭವಿಷ್ಯಕ್ಕೆ 10 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುವುದು. ಇದಲ್ಲದೆ ಸ್ಪಾನ್ಶರಶಿಪ್ ಯೋಜನೆಯಡಿ ಮಾಹೆಯಾನ 2000 ರೂ. ಆರ್ಥಿಕ ಸೌಲಭ್ಯ 2021-22ನೇ ಸಾಲಿನಿಂದ ಜಾರಿಗೊಳಿಸಿದ್ದು, 18 ವರ್ಷದೊಳಗಿನ ಮಕ್ಕಳಿಗೆ ಗರಿಷ್ಠ 3 ವರ್ಷ ಅಥವಾ 18 ವರ್ಷದ ವರೆಗೆ (ಇದರಲ್ಲಿ ಯಾವುದು ಮೊದಲು ಅಲ್ಲಿಯ ವರೆಗೆ) ಇದು ಸಿಗಲಿದೆ ಎಂದು ಪಿ.ಎಂ.ಕೇರ್ ಯೋಜನೆಗಳ ಕುರಿತು ವಿವರಿಸಿದರು.
ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 1-12ನೇ ತರಗತಿ ವರೆಗೆ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಡಿಜಿಟಲ್ ಮೋಡ್ ಮೂಲಕ ಸ್ಕಾಲರ್ಶಿಪ್ ಹಣ ವರ್ಗಾವಣೆಗೊಳಿಸಿದರು.

ಇದಕ್ಕೂ ಮುನ್ನ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮøತಿ ಇರಾನಿ ಮಾತನಾಡಿ ದೇಶದಲ್ಲಿ
ಕೋವಿಡ್ನಿಂದ ಹೆತ್ತವರನ್ನು ಕಳೆದಕೊಂಡ 4345 ಮಕ್ಕಳ ರಕ್ಷಣೆಯ ಜವಬ್ದಾರಿ ಸರ್ಕಾರ ವಹಿಸಿಕೊಂಡಿದೆ ಎಂದರು.
ಮಕ್ಕಳಿಗೆ ಕಿಟ್ ವಿತರಣೆ ಮಾಡಿದ ಡಿ.ಸಿ.; ಕಾರ್ಯಕ್ರಮದ ಅಂಗವಾಗಿ ಕೋವಿಡ್ ನಿಂದ ತಂದೆ-ತಾಯಿಗಳನ್ನು ಕಳೆದಕೊಂಡ ಕಲಬುರಗಿಯ ಮಕ್ತಂಪೂರ ಪ್ರದೇಶದ 10 ವರ್ಷದ ತನುಷ್ ವಿ.ಎಸ್. ತಂದೆ ದಿ. ವೇದಮೂರ್ತಿ, ಕಲಬುರಗಿಯ ಶಾಂತಿ ನಗರದ 14 ವರ್ಷದ ಮಾನಸಿ ತಂದೆ ದಿ. ಶಿವಾಜಿರಾವ್ ಹಾಗೂ ಆಳಂದ ತಾಲೂಕಿನ ಹೊದಲೂರು ಗ್ರಾಮದ 17 ವರ್ಷದ ಗಣೇಶ ತಂದೆ ದಿ. ಬಂದಪ್ಪ ಮಕ್ಕಳಿಗೆ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಅಂಚೆ ಇಲಾಖೆಯ ಪಾಸ್ ಬುಕ್, ಮಕ್ಕಳಿಗೆ ಬರೆದ ಪ್ರಧಾನಮಂತ್ರಿಗಳ ಪತ್ರ, ಆಯುಸ್ಮಾನ್ಆರೋಗ್ಯ ಕಾರ್ಡ್, ಪಿ.ಎಂ.ಕೇರ್ ಸರ್ಟಿಫಿಕೇಟ್ ಒಳಗೊಂಡ ಕಿಟ್ ವಿತರಿಸಿ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಮಕ್ಕಳಿಗೆ ಶುಭ ಹಾರೈಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನವೀನ್ ಯು., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶರಣಬಸಪ್ಪ ಬೆಳಗುಂಪಿ, ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಭರತೇಶ ಶೀಲವಂತ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ಯಲ್ಲಾಲಿಂಗ ಕಾಳನೂರ ಮತ್ತಿತರಿದ್ದರು…

ವರದಿ. ಬಸವರಾಜ್ ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
