ಬಹುತ್ವ ಕರ್ನಾಟಕ ವೇದಿಕೆ ವತಿಯಿಂದ ವಿನೂತನ ಪ್ರತಿಭಟನೆ.
ಸಿಂಧನೂರು : ನಗರದ ತಹಸೀಲ್ದಾರ ಕಚೇರಿ ಮುಂದೆ ಬಹುತ್ವ ಕರ್ನಾಟಕ ವೇದಿಕೆ ನೇತೃತ್ವದಲ್ಲಿ ಧಾರವಾಡದ ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಕಲ್ಲಂಗಡಿ ಹಣ್ಣಿನ ವ್ಯಾಪಾರಿ ನಬೀಸಾಬ್ ಅವರ ಮೇಲೆ ಗೂಂಡಾಗಿರಿ ಮಾಡಿರುವ ಕೋಮುವಾದಿ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸಾಮರಸ್ಯ ಸಹಬಾಳ್ವೆ ವಾತಾವರಣ ಕಾಪಾಡಲು ಒತ್ತಾಯಿಸಿ ಪ್ರತಿಭಟನೆ ಮೂಲಕ ತಹಸೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ನೀಡಲಾಯಿತು.

ಶಾಂತಿ-ಸುವ್ಯವಸ್ಥೆ ಕಾಪಾಡಲು ವಿಫಲರಾಗಿರುವ ಧಾರವಾಡ ಜಿಲ್ಲಾಡಳಿತ,ಜಿಲ್ಲಾ ಎಸ್ಪಿ ವಿರುದ್ಧ ಶಿಸ್ತು ಕ್ರಮ ಮತ್ತು ದುಷ್ಕೃತ್ಯಕ್ಕೆ ಕಾರಣರಾದ ಇದಕ್ಕೆ ಪ್ರೇರಪಣೆ ನೀಡಿದ ಎಲ್ಲರನ್ನು ಬಂಧಿಸಿ ಕಾನೂನು ಶಿಕ್ಷೆಗೆ ಒಳಪಡಿಸಬೇಕೆಂದು
ಆಗ್ರಹಿಸಿದರು.
ನಾಗರಾಜ ಪೂಜಾರಿ ಮಾತನಾಡಿ ಧಾರವಾಡದ ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಕಲ್ಲಂಗಡಿ ಹಣ್ಣು ಮಾರುತ್ತಿದ್ದ ಬಡ ವ್ಯಾಪಾರಿ ನಬೀಸಾಬ್ ಅವರ ಮೇಲೆ ಕೋಮುವಾದಿ ಶ್ರೀರಾಮಸೇನೆ ಸಂಘಟನೆಯ ದುಷ್ಕರ್ಮಿಗಳು ಗೂಂಡಾಗಿರಿ ನಡೆಸಿ, ತಿನ್ನುವ ಹಣ್ಣುಗಳನ್ನು ನೆಲಕ್ಕೆ ಎಸೆದು ಅಮಾನವೀಯವಾಗಿ ವರ್ತಿಸಿದ್ದು,ಈ ಪೈಶಾಚಿಕ ದುಷ್ಕೃತವನ್ನು ಬಹುತ್ವ ಕರ್ನಾಟಕ ವೇದಿಕೆ ಬಲವಾಗಿ ಖಂಡಿಸುತ್ತದೆ ಎಂದು ಮಾತನಾಡಿದರು.
ನಂತರ ಮಾತನಾಡಿದ ಅಶೋಕ ನಂಜಲದಿನ್ನಿ,ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ,ಅಡುಗೆ ಎಣ್ಣೆ ಕೆಜಿಗೆ 200 ರೂಪಾಯಿ ತಲುಪಿ ದಿನದಿಂದ ದಿನಕ್ಕೆ ಏರುತ್ತಿರುವ ದಿನ ಬಳಕೆ ವಸ್ತುಗಳು ಹಾಗೂ ಔಷಧಿ ಬೆಲೆಗಳು ಜನರನ್ನು ಕಷ್ಟಕೋಟಲೆಗಳಿಗೆ ನೂಕಿದ್ದು ಬಡವರು, ಮಧ್ಯಮ ವರ್ಗದವರು ಜೀವನ ನಡೆಸಲಾಗದೇ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.ಜನರು ಜೀವನ ನಡೆಸಲು ಪಡುತ್ತಿರುವ ಪಾಡು ಚರ್ಚೆಯ ಮುಖ್ಯ ವಿಷಯವಾಗಬಾರದು, ಅದು ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು ಎನ್ನುವ ಆತಂಕದಿಂದಾಗಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಈಗಿನಿಂದಲೇ ರಾಜ್ಯದಲ್ಲಿ ಕೋಮು ಗಲಭೆ ಎಬ್ಬಿಸಿ ಆ ಮೂಲಕ ಜನರ ನೈಜ ಸಮಸ್ಯೆಗಳನ್ನು ಮರೆಮಾಚುತ್ತಿರುವುದು ಬಹಿರಂಗ ಸತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಮಯ್ಯ, ಬಸವರಾಜ, ವೆಂಕಟೇಶ್ ಗಿರಿಜಾಲಿ, ಬಸವರಾಜ ಹಸ್ಮಕಲ್, ಮಂಜುನಾಥ ಗಾಂಧಿನಗರ, ಪಂಪಾಪತಿ, ಖಾಸಿಂ ಸಾಬ, ಹುಸೇನಸಾಬ್, ಎಮ್ ಡಿ ಅಸೀಫ್ ಬೇಗಮ್, ಸೇರಿದಂತೆ ಇತರರು ಭಾಗವಹಿಸಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
