;

ಭಾರತದ ಸಾಂಸ್ಕೃತಿಕ ಲೋಕದ ಮುಸ್ಲಿಂ ರಾಯಭಾರಿಗಳು…..!

ಭಾರತದ ಸಾಂಸ್ಕೃತಿಕ ಲೋಕದ ಮುಸ್ಲಿಂ ರಾಯಭಾರಿಗಳು…..!

ಮುಸ್ಲಿಂ ಸಮುದಾಯವನ್ನು ದ್ವೇಷಿಸುವುದನ್ನ ತಮ್ಮ ಬದುಕಿನ ಧ್ಯೇಯವಾಗಿಸಿಕೊಂಡ ಅವಿವೇಕಿಗಳು ಒಮ್ಮೆ ನಮ್ಮ ದೇಶದ ಪ್ರಾಚೀನ ಇತಿಹಾಸ ಬೇಡ; ಕಳೆದ ಶತಮಾನ ಹಾಗೂ ವರ್ತಮಾನದ ಬದುಕಿನತ್ತ ಅವಲೋಕಿಸಿದ್ದರೆ ಅವರ ತಲೆಯೊಳಗಿನ ಮಣ್ಣು ಖಾಲಿಯಾಗಿರುತ್ತಿತ್ತು. ಶತಶತಮಾನಗಳಿಂದ ಅನ್ಯ ಧರ್ಮಗಳಲ್ಲಿ ಜನಿಸಿದ್ದರೂ ಸಹ ನಮ್ಮಂತೆ ಬದುಕಿ, ಬಾಳಿ ನಮ್ಮಂತೆ ಇದೇ ನೆಲದ ಗಾಳಿ, ನೀರು ಸೇವಿಸುತ್ತಾ ಬದುಕಿರುವ ಮುಸ್ಲಿಂರು ಮತ್ತು ಕ್ರೈಸ್ತರು ಎಲ್ಲಾ ಸಮಾನವಾದ ಹಕ್ಕುಗಳನ್ನು ಪಡೆ್ವರು.

ತಮ್ಮ ಬದುಕಿನ ವೃತ್ತಿಗಾಗಿ ಅವರು ಆಯ್ಕೆಮಾಡಿಕೊಂಡ ಉದ್ಯೋಗದಲ್ಲಿ ಎಂದಿಗೂ ತಮ್ಮ ಧರ್ಮವನ್ನು ಮುನ್ನೆಲೆಗೆ ತರುವುದು ಅಥವಾ ಇತರೆ ಧರ್ಮವನ್ನು ಕಡೆಗಣಿಸುವ ಕಾರ್ಯಕ್ಕೆ ತಲೆ ಹಾಕಲಿಲ್ಲ. ತಮಗೆ ಅನ್ನ ನೀಡುವ ವೃತ್ತಿಯೇ ನಿಜವಾದ ಧರ್ಮ ಎಂದು ಪರಿಗಣಿಸಿ ಭಾರತದ ಬಹುಸಂಸ್ಕೃತಿಯ ಗುಣವನ್ನು ಎತ್ತಿ ಹಿಡಿದರು. ದೇಶದ ಸಾವಿರಾರು ಮಂದಿ ಕಲಾವಿದರಲ್ಲಿ ಇಲ್ಲಿ ನಾನು ಶಹನಾಯ್ ಮತ್ತು ನಾದಸ್ವರವನ್ನು ವೃತ್ತಿಯಾಗಿಸಿಕೊಂಡು ಹಿಂದೂ ಧರ್ಮದ ದೇವಾಲಯಗಳಲ್ಲಿ ಮತ್ತು ಶುಭ ಸಮಾರಂಭಗಳಲ್ಲಿ ಮಂಗಳವಾದ್ಯ ನುಡಿಸಿದ ಕಲಾವಿದರನ್ನು ಕುರಿತು ಮಾತ್ರ ಬರೆಯುತ್ತಿದ್ದೇನೆ. ಉತ್ತರ ಭಾರತದ ವಾರಾಣಾಸಿಯ ಕಾಶಿ ವಿಶ್ವನಾಥನ ದೇಗುಲದಲ್ಲಿ ಶಹನಾಯ್ ನುಡಿಸಿದ ಉಸ್ತಾದ್ ಆಲಿಭಕ್ಸ್ ಮತ್ತು ಅವರ ಸೋದರಳಿಯ ಮತ್ತು ಶಿಷ್ಯರಾದ ಬಿಸ್ಮಿಲ್ಲಾಖಾನ್ ಒಂದು ಕಡೆಯಾದರೆ, ದಕ್ಷಿಣ ಭಾರತದ ದೇವಾಲಯಗಳಲ್ಲಿ ನಾದಸ್ವರ ನುಡಿಸಿದ ಶೇಕ್ ಚಿನ್ನ ಮೌಲಾನ ಹಾಗೂ ಈಗ ನುಡಿಸುತ್ತಿರುವ ಶೇಕ್ ಮೆಹಬೂಬ್ ಸುಭಾನಿ ಮತ್ತು ಅವರ ಪತ್ನಿ ಕಲೀಸಾಬ್ ಮೆಹಬೂಬ್ ಇವರ ಕಾರ್ಯ ಎಲ್ಲರ ಕಣ್ಣು ತೆರಸುವಂತಹದ್ದು.

ಭಾರತದುದ್ದಕ್ಕೂ ಶುಭ ಸಮಾರಂಭಗಳು ಹಾಗೂ ದೇವರ ಪೂಜೆಯಿಂದ ಹಿಡಿದು ಎಲ್ಲಾ ಧಾರ್ಮಿಕ ಕ್ರಿಯೆಗಳಲ್ಲಿ ಮಂಗಳಕರ ವಾದ್ಯ ನಮ್ಮ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗವಾಗಿದೆ. ಉತ್ತರ ಭಾರತದಲ್ಲಿ ಶಹನಾಯ್ ವಾದ್ಯವನ್ನು ಮಂಗಳವಾದ್ಯ ಎಂದು ಪರಿಗಣಿಸಿದ ರೀತಿಯಲ್ಲಿ ದಕ್ಷಿಣ ಭಾರತದಲ್ಲಿ ನಾದಸ್ವರವನ್ನು ಪರಿಗಣಿಸಲಾಗಿದೆ. ಕೇವಲ ಮಂಗಳಕರ ಕಾರ್ಯಗಳಿಗೆ ಮಾತ್ರ ಸೀಮಿತವಾಗಿದ್ದ ಈ ವಾದ್ಯಗಳಿಗೆ ಉತ್ತರದ ಹಿಂದೂಸ್ತಾನಿ ಸಂಗೀತ ಕಚೇರಿಗಳಿಗೆ ಕೊಂಡೊಯ್ದ ಕೀರ್ತಿ ಪಂಡಿತ್ ಬಿಸ್ಮಿಲ್ಲಾ ಖಾನ್ ರವರಿಗೆ ಸಲ್ಲುತ್ತದೆ. ಅದೇ ರೀತಿ ತಳಸಮುದಾಯದ ವಾದ್ಯ ಎಂದು ಪರಿಗಣಿಸಿದ್ದ ನಾದಸ್ವರವನ್ನು ಕರ್ನಾಟಕ ಸಂಗೀತದ ರಾಗಗಳನ್ನು ನುಡಿಸುವುದರ ಮೂಲಕ ಸಂಗೀತ ಕಚೇರಿಯಲ್ಲಿ ಸ್ಥಾನಮಾನ ದಕ್ಕಿಸಿಕೊಟ್ಟ ಕೀರ್ತಿಟಿ.ಎನ್. ನಾಗರತ್ನಂ ಪಿಳ್ಳೈ ಅವರಿಗೆ ಸಲ್ಲುತ್ತದೆ. ಇದರಿಂದಾಗಿ ಕಲಾವಿದರು ಆಸ್ಥಾನ ವಿದ್ವಾಂಸರ ಮಟ್ಟಕ್ಕೆ ಬೆಳೆದು ನಿಲ್ಲಲು ಸಾಧ್ಯವಾಯಿತು.

ಪಂಡಿತ್ ಬಿಸ್ಮಿಲ್ಲಾಖಾನ್ ಬಿಹಾರದ ದುಮ್ ರಾನ್ ಎಂಬ ಪಟ್ಟಣದಲ್ಲಿ ಶಹನಾಯ್ ವಾದನವನ್ನು ವೃತ್ತಿಯಾಗಿಸಿಕೊಂಡಿದ್ದ ಕುಟುಂಬದಲ್ಲಿ ಜನಿಸಿದವರು( 1916) ಅವರ ಅಜ್ಜ ಮತ್ತು ತಂದೆ ಇಬ್ಬರೂ ಸ್ಥಳಿಯ ಸಂಸ್ಥಾನವೊಂದರಲ್ಲಿ ಕಲಾವಿದರಾಗಿದ್ದರು. ಬಿಸ್ಮಿಲ್ಲಾ ಖಾನರ ತಾಯಿ ವಾರಣಾಸಿ ನಗರದ ಶಹನಾಯ್ ವಾದನದ ಕುಟುಂಬದಿಂದ ಬಂದವರು. ಅವರ ಕಿರಿಯ ಸಹೋದರ ಉಸ್ತಾದ್ ಆಲಿಭಕ್ಸ್ ಅವರು ತಿಂಗಳಿಗೆ ನಾಲ್ಕು ರೂಪಾಯಿ ವೇತನದ ಆಧಾರದ ಮೇಲೆ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಶಹನಾಯ್ ವಾದ್ಯ ನುಡಿಸುತ್ತಿದ್ದರು. ಒಮ್ಮೆ ಬಿಸ್ಮಿಲ್ಲಾ ಖಾನರ ತಾಯಿ ತಮ್ಮ ಮೂರು ವರ್ಷದ ಪುತ್ರ ನೊಂದಿಗೆ ವಾರಣಾಸಿಯ ತವರು ಮನೆಗೆ ಬಂದಾಗ, ಬಾಲಕ ಬಿಸ್ಮಿಲ್ಲಾ ತನ್ನ ಸೋದರ ಮಾವ ಆಲಿಭಕ್ಸ್ ನುಡಿಸುತ್ತಿದ್ದ ಶಹನಾಯ್ ವಾದ್ಯವನ್ನು ಕೇಳುತ್ತಾ ಅವರ ಬಳಿ ಸದಾ ಕೂರುತ್ತಿದ್ದರು. ಇದನ್ನು ಗಮನಿಸಿದ ಅವರ ತಾಯಿ ಪುತ್ರನನ್ನು ಸಹೋದರನ ಬಳಿ ಬಿಟ್ಟು ಹೋದರು.
ತನ್ನ ಮೂರನೆಯ ವಯಸ್ಸಿನಿಂದ ಶಹನಾಯ್ ವಾದ್ಯ ಕಲಿಯಲು ಆರಂಭಿಸಿ ಬಿಸ್ಮಿಲ್ಲಾ ಖಾನರು ತನ್ನ ಗುರು ಹಾಗೂ ಸೋದರಮಾವನಿಂದ ಕೇವಲ ಸಂಗೀತದ ಶಿಕ್ಷಣವನ್ನು ಮಾತ್ರ ಕಲಿಯಲಿಲ್ಲ, ಅನ್ಯ ಧರ್ಮ ಮತ್ತು ಸಂಸ್ಕೃತಿಯನ್ನು ಪ್ರೀತಿಸುವುದು ಮತ್ತು ಗೌರವಿಸುದನ್ನು ಕಲಿತರು. ಉಸ್ತಾದ್ ಆಲಿಭಕ್ಸ್ ರವರು ಬೆಳಗಿನ ಜಾವ ನಾಲ್ಕುಗಂಟೆಗೆ ಎದ್ದು ಗಂಗಾನದಿಯಲ್ಲಿ ಸ್ನಾನ ಮಾಡಿ ಐದುಗಂಟೆ ವೇಳೆಗೆ ಕಾಶಿವಿಶ್ವನಾಥನ ಸನ್ನಿಧಿಯಲ್ಲಿ ಹಾಜರಿರುತ್ತಿದ್ದರು. ದೇವಸ್ಥಾನದ ಅರ್ಚಕ ಮತ್ತು ಆಲಿಭಕ್ಸ್ ಇಬ್ಬರಿಗೂ ವಿಶ್ವನಾಥನ ಪ್ರಥಮ ಪೂಜೆ ಕಾರ್ಯಕ್ರಮ ಕೇವಲ ವೃತ್ತಿಯಾಗಿರದೆ, ದೇವರ ಸನ್ನಿಧಿಯಲ್ಲಿ ಧ್ಯಾನಸ್ಥ ಮನಸ್ಸಿನಲ್ಲಿ ಸಲ್ಲಿಸುವ ಸೇವೆಯಾಗಿತ್ತು. ದೇವಸ್ಥಾನದ ಹಿಭಾಗ ಕೇವಲ ಇನ್ನೂರು ಅಡಿ ದೂರದಲ್ಲಿರುವ ಮಸೀದಿಯಿಂದ ( ಔರಂಗಜೇಬ್ ನಿರ್ಮಿಸಿದ ಇದನ್ನು ಔರಂಗಜೇಬ್ ಮಸೀದಿ ಎಂದು ಕರೆಯಲಾಗುತ್ತದೆ) ಬೆಳಗಿನ ಜಾವ ಕೇಳಿಬರುತ್ತಿದ್ದ ಪ್ರಾರ್ಥನೆಯನ್ನು ಕಿವಿಗೆ ಹಾಕಿಕೊಳ್ಳದೆ ಗಂಟೆ ಜಾಗಟೆ ಮತ್ತು ವೇದಮಂತ್ರ ಘೋಷಗಳ ನಡುವೆ ಶಹನಾಯ್ ವಾದ್ಯವನ್ನು ನುಡಿಸುತ್ತಾ ವಿಶ್ವನಾಥನ ಸ್ಮರಣೆಯಲ್ಲಿ ಮೈ ಮರೆಯುತ್ತಿದ್ದರು. ಆಲಿಭಕ್ಸ್ ಅವರ ಪಾಲಿಗೆ ಅಲ್ಲಾ ಮತ್ತು ವಿಶ್ವನಾಥ ಇವರ ನಡುವೆ ಭೇದವಿರಲಿಲ್ಲ. ಬೆಳಿಗ್ಗೆ ಏಳುಗಂಟೆಯ ವೇಳೆಗೆ ದೇವಸ್ಥಾನದ ಪ್ರಸಾದ ಸೇವಿಸಿ ನಂತರ ಒಂದು ಲೊಟ ಭಾದಾಮಿ ಹಾಲು ಕುಡಿದು ಗಂಗಾ ನದಿಯ ತಟದಲ್ಲಿರುವ ಬಾಲಾಜಿ ದೇಗುಲದ ಬಳಿಯ ಕೊಠಡಿಯೊಂದರಲ್ಲಿ ಕುಳಿತು ಹನ್ನೊಂದು ಗಂಟೆಯವರೆಗೆ ರಿಯಾಜ್ ಅಥವಾ ಅಬ್ಯಾಸ ಮಾಡುತ್ತಿದ್ದರು. ತಮ್ಮ ಇಡೀ ಬದುಕನ್ನು ಮತ್ತು ಹವ್ಯಾಸವನ್ನು ತಮ್ಮ ಸದೋರಳಿಯ ಬಿಸ್ಮಿಲ್ಲಾಖಾನ್ ಗೆ ಧಾರೆಯೆರೆದರು. ತನ್ನ ಬಾಲ್ಯದಿಂದ ಇಂತಹ ಮಹಾನ್ ಭಾವಕ್ಯತೆ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದ ಬಿಸ್ಮಿಲ್ಲಾ ಖಾನರು ಇಡೀ ಬದುಕಿನುದ್ದಕ್ಕೂ ಅಪ್ಪಟ ಮನುಷ್ಯರಾಗಿ ಮತ್ತು ಅಸಮಾನ್ಯ ಕಲಾವಿದರಾಗಿ ಬದುಕಿದರು.

ಮುಂದಿನ ದಿನಗಳಲ್ಲಿ ತಮ್ಮ ಗುರುವಿನ ಸಹೋದರನ ಪುತ್ರಿಯನ್ನು ವಿವಾಹವಾದ ಬಿಸ್ಮಿಲ್ಲಾ ಖಾನರು ಸೋದರಮಾವ ಆಲಿಭಕ್ಸ್ ಇರುವವರೆಗೂ ಅವರ ನಮ್ರ ಶಿಷ್ಯನಾಗಿ, ಅಳಿಯನಾಗಿ ಶಹನಾಯ್ ವಾದ್ಯವನ್ನು ಕಲಿಯುತ್ತಾ, ಕಾಶಿ ವಿಶ್ವನಾಥನ ಸೇವೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಹಿಂದೂಸ್ತಾನಿ ರಾಗಗಳನ್ನು ಮತ್ತು ಉತ್ತರ ಪ್ರದೇಶದ ಪೂರ್ವಭಾಗದ ಜನಪದ ಗೀತೆಗಳನ್ನು ಶಹನಾಯ್ ವಾದ್ಯದ ಮೂಲಕ ಮೊಳಗಿಸಿ ಅಂತರಾಷ್ಟ್ರೀಯ ಮಟ್ಟದ ಕಲಾವಿದರಾಗಿ ಬೆಳೆದರು. 1936 ರಲ್ಲಿ ಲಕ್ನೋ ನಗರದಲ್ಲಿ ಪ್ರಾರಂಭವಾದ ಆಕಾಶವಾಣಿ ಕೇಂದ್ರವು ಬಿಸ್ಮಿಲ್ಲಾ ಖಾನರ ಪ್ರತಿಭೆಯನ್ನು ದೇಶದೆಲ್ಲೆಡೆ ಪ್ರಚಾರ ಮಾಡಿತು. 1947 ರ ಆಗಸ್ಟ್ 15 ಭಾರತದ ಪ್ರಥಮ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಥಮ ಮಂಗಳಕರ ವಾದ್ಯವಾಗಿ ಬಿಸ್ಮಿಲ್ಲಾ ಖಾನರ ಶಹನಾಯ್ ವಾದನ ಮೊಳಗಿತು. ಪ್ರಧಾನಿ ನೆಹರೂ ಅವರು ವಿಶೇಷ ಅಧಿಕಾರಿಯನ್ನು ಕಳುಹಿಸಿ ಬಿಸ್ಮಿಲ್ಲಾ ಖಾನರನ್ನು ದೆಹಲಿಗೆ ಕರೆಸಿಕೊಂಡಿದ್ದರು. ಮತ್ತೊಂದು ವಿಶೇಷವೆಂದರೆ 2007 ರಲ್ಲಿ ಸ್ವಾತಂತ್ಯೋತ್ಸವದ ಐವತ್ತನೆಯ ವರ್ಷದ ಸಂಭ್ರಮದಲ್ಲಿ ಇದೇ ಬಿಸ್ಮಿಲ್ಲಾ ಖಾನರು ದೆಹಲಿ ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ಕಾರ್ಯಕ್ರಮ ನೀಡಿದರು. ಇಂದಿಗೂ ಸಹ ಆಗಸ್ಟ್ 15 ರ ಬೆಳಿಗ್ಗೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬಿಸ್ಮಿಲ್ಲಾ ಖಾನರ ಶಹನಾಯ್ ವಾದನವನ್ನು ಸ್ವಾತಂತ್ರ್ಯದ ಕಹಳೆ ಎಂಬಂತೆ ಆಕಾಶವಾಣಿ ಪ್ರಸಾರ ಮಾಡುತ್ತದೆ. ಮುಸ್ಲಿಂರ ಬಗ್ಗೆ ವಿಷ ಕಕಕ್ಕುವ ಮಿಡಿ ನಾಗರಗಳು ನಮ್ಮ ದೇಶದ ಸಂಸ್ಕೃತಿ ಎಂತಹದ್ದು ಎಂಬುದನ್ನು ಇಂತಹವರ ಇತಿಹಾಸದಿಂದ ಪಾಠ ಕಲಿಯಬೇಕು.
( ಆಸಕ್ತರು ನನ್ನ ಕೃತಿ ‘ ಸಂಗೀತ ಲೋಕದ ಸಂತ ಬಿಸ್ಮಿಲ್ಲಾ ಖಾನ್’ ಕೃತಿಯನ್ನು ಓದಬಹುದು. )

ಬಿಸ್ಮಿಲ್ಲಾ ಖಾನ್ ರವರು ಪ್ರಸಿದ್ಧ ಕಲಾವಿದರಾಗಿದ್ದರೂ ಕೂಡ ವಾರಣಾಸಿ ನಗರದಲ್ಲಿ ಒಬ್ಬ ಜನಸಾಮಾನ್ಯನಂತೆ ಬದುಕಿದರು. ಹೋಳಿ ಹಬ್ಬ, ರಾಮನವಮಿ, ಶ್ರಾವಣ ಮತ್ತು ಮೊಹರಂ ಆಚರಣೆಯ ಸಂದರ್ಭದಲ್ಲಿ ಸ್ವಯಂ ಪ್ರೇರಿತರಾಗಿ ಹೋಗಿ ಶಹನಾಯ್ ನುಡಿಸಿ ಬರುವುದು ಅವರ ಹವ್ಯಾಸವಾಗಿತ್ತು. ಒಟ್ಟು ನಾಲ್ಕು ಕುಟುಂಬಗಳ ಅವಿಭಕ್ತ ಕುಟುಂಬದ ಜವಾಬ್ದಾರಿ ಅವರ ಮೇಲಿತ್ತು. ಸಹೋದರ,ಇಬ್ಬರು ಸೋದರ ಮಾವಂದಿರು ಮತ್ತು ತನ್ನ ಕುಟುಂಬದ ಒಟ್ಟು ಐವತ್ತೈದು ಮಂದಿ ಸದಸ್ಯರು ಬಿಸ್ಮಿಲ್ಲಾ ಖಾನರ ಸಂಪಾದನೆಯಿಂದ ಬದುಕಬೇಕಿತ್ತು. ಎಂತಹ ಸ್ಥಿತಿಯಲ್ಲಿಯೂ ಅವರು ಸಂಗೀತ ಕಚೇರಿ ಆಯೋಜಕರಿಂದ ಹೆಚ್ಚಿನ ಸಂಭಾವನೆಗೆ ಒತ್ತಾಯಿಸಲಿಲ್ಲ. ಒಮ್ಮೆ ಅಮೇರಿಕಾ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಅಲ್ಲಿನ ಶ್ರೀಮಂತ ವಾಣಿಜ್ಯೋದ್ಯಮಿಯೊಬ್ಬ ಬಿಸ್ಮಿಲ್ಲಾ ಖಾನರ ಬಳಿ ಬಂದು ‘ನೀವು ಅಮೇರಿಕಾದಲ್ಲಿ ಬಂದು ನೆಲಸಿದರೆ ನಿಮಗೆ ಬೇಕಾದ್ದನ್ನು ನಾನು ನೀಡಲು ಸಿದ್ಧ’ ಎಂದು ನುಡಿದಾಗ ಬಿಸ್ಮಿಲ್ಲಾಖಾನ್ ನಿರಾಕರಿಸಿದರು. ನೀವು ಕೇಳಿದಷ್ಟು ಹಣ ಮತ್ತು ಸೌಕರ್ಯವನ್ನು ಒದಗಿಸುತ್ತೇನೆ ಎಂದಾಗ; ಬಿಸ್ಮಿಲ್ಲಾಖಾನರು ‘ ನನಗೆ ಗಂಗೆ ಮತ್ತು ಕಾಶಿ ವಿಶ್ವನಾಥನನ್ನು ಇಲ್ಲಿಗೆ ತಂದು ಕೊಟ್ಟರೆ ನಾನು ಅಮೇರಿಕಾದಲ್ಲಿ ನೆಲೆಸಲು ಸಿದ್ಧ ಎಂದು ನುಡಿದರು. ಉದ್ಯಮಿ ಮೌನಕ್ಕೆ ಶರಣಾದ. ಒಬ್ಬ ಮನುಷ್ಯ ಭಾರತೀಯ ನಾಗರೀಕನಾಗಿ, ಅನ್ಯ ಧರ್ಮಗಳ ಸಹಿಷ್ಣುವಾಗಿ ಮತ್ತು ಅಪ್ಪಟ ಕಲಾವಿದನಾಗಿ ಹೇಗೆ ಬದುಕಬೇಕೆಂಬುದಕ್ಕೆ ಬಿಸ್ಮಿಲ್ಲಾ ಖಾನ್ ಮಾದರಿಯಾಗಿದ್ದರು.

ಮೂಲತಃ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕರವಾಡಿ ಎಂಬ ಗ್ರಾಮದಲ್ಲಿ 1924 ರಲ್ಲಿ ಜನಿಸಿದ ಶೇಕ್ ಚಿನ್ನಮೌಲಾನ ಹರೆಯದಲ್ಲಿ ತಮಿಳುನಾಡಿನ ಶ್ರೀರಂಗಂ ಪಟ್ಟಣಕ್ಕೆ ಬಂದು ಶ್ರೀರಂಗನಾಥನ ಆರಾಧನೆಯಲ್ಲಿ ಬುಕಿದವರು. ನಾಗರತ್ನಂ ಪಿಳ್ಳೈ ನಂತರ ನಾದಸ್ವರ ವಾದನದಲ್ಲಿ ಹೆಸರು ಮಾಡಿದ ಶೇಕ್ ಮೌಲಾನ ಪ್ರಸಿದ್ಧ ಕಲಾವಿದರಾಗಿದ್ದರು. ಕರ್ನಾಟಕ ಸಂಗೀತದ ತ್ರೀಮೂರ್ತಿ ವಾಗ್ಗೆಯಕಾರರಾದ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮಾಶಾಸ್ತ್ರಗಳ ಕೀರ್ತನೆಗಳನ್ನು ಅವರ ನಾದಸ್ವರದಲ್ಲಿ ಕೇಳುವುದು ಶೋತೃಗಳ ಪಾಲಿಗೆ ಆನಂದದ ಸಂಗತಿಯಾಗಿತ್ತು. ತಿರುಪತಿಯ ವೆಂಕಟೇಶ್ವರ ರ ಸನ್ನಿಧಿಯೂ ಸೇರಿದಂತೆ, ತಮಿಳುನಾಡಿನ ಎಲ್ಲಾ ಪ್ರಸಿದ್ಧ ದೇವಾಲಯಗಳ ದೇವರ ಸನ್ನಿಧಿಯಲ್ಲಿ ಕುಳಿತು ಅವರು ನುಡಿಸಿದ ಕೀರ್ತನೆಗಳು ಇಂದಿಗೂ ತಮಿಳುನಾಡು ಮತ್ತು ಆಂಧ್ರದ ಸಂಗೀತ ಪ್ರಿಯರ ಮನದಲ್ಲಿ ಹಸಿರಾಗಿದೆ. ಪದ್ಮಶ್ರೀ, ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ, ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಸಂಗೀತ ಕಲಾನಿಧಿ ಪ್ರಶಸ್ತಿ ಸೇರಿದಂತೆ ನೂರಾರು ಗೌರವಗಳಿಗೆ ಪಾತ್ರರಾಗಿದ್ದ ಶೇಕ್ ಮೌಲಾನಾ ಅವರು ತಮ್ಮ ಜೀವಿತದ ಕೊನೆಯ ಕ್ಷಣದವರೆಗೂ ( 1999) ಬಾತೃತ್ವ ಸಂಸ್ಕೃತಿಯನ್ನು ಉಸಿರಾಡಿದರು. 1972 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ಇಪ್ಪತ್ತೈದು ವರ್ಷಗಳ ನೆನಪಿಗೆ ದೆಹಲಿಯ ಕೆಂಪುಕೋಟೆಯಲ್ಲಿ ನಾದಸ್ವರ ನುಡಿಸುವ ಗೌರವಕ್ಕೆ ಪಾತ್ರರಾದರು. ಇಂತಹ ಮಹಾನು ಭಾವರನ್ನು ನಾವು ಮುಸ್ಲಿಂ ಕಲಾವಿದ ಎಂದು ಕಡೆಗಣಿಸಲು ಸಾಧ್ಯವೆ? ಈಗ ಇವರ ಪುತ್ರರಿಬ್ಬರೂ ಜೋಡಿಯಾಗಿ ( ಕಾಸಿಂ ಮತ್ತು ಬಾಬು) ನಾದಸ್ವರ ನುಡಿಸುತ್ತಾ ಪ್ರಸಿದ್ಧ ಕಲಾವಿದರಾಗಿದ್ದಾರೆ.

ಆಂಧ್ರಪ್ರದೇಶದ ಮಸ್ಲಿಂ ದಂಪತಿಗಳ ಜೋಡಿಯೊಂದು ಈಗ ನಾದಸ್ವರ ವಾದನದಲ್ಲಿ ಈಗ ಅತ್ಯಂತ ಪ್ರಸಿದ್ಧಿಯಾಗಿದೆ.ಶೇಕ್ ಮೆಹಬೂಬ್ ಸುಭಾನಿ ಮತ್ತು ಪತ್ನಿ ಕಲೀಸಾಬ್ ಮೆಹಬೂಬ್ ಇಬ್ಬರೂ ಆಂಧ್ರದ ದೇವಾಲಯಗಳು ಮತ್ತು ಸಂಗೀತ ಕಚೇರಿಗಳಲ್ಲಿ ಕರ್ನಾಟಕ ಸಂಗೀತದ ದೇವರ ಕೀರ್ತನೆಗಳನ್ನು ನುಡಿಸುತ್ತಾ ಮನೆ ಮಾತಾಗಿದ್ದಾರೆ. ಅಷ್ಟೇ ಏಕೆ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕಾಪುವಿನ ಮಾರಿಗುಡಿ ಜಾತ್ರೆಯಲ್ಲಿ ಮುಸ್ಲಿಂ ರು ವ್ಯಾಪಾರ ನಡೆಸಬಾರದೆಂದು ಕೋಮುವಾದಿ ಮನಸ್ಸುಗಳು ತಾಕೀತು ಮಾಡಿದರು. ಆದರೆ, ಅದೇ ದೇವಾಲಯದಲ್ಲಿ ಕಳೆದ ಐವತ್ತು ಅರವತ್ತು ವರ್ಷಗಳಿಂದ ಮುಸ್ಲಿಂ ಕುಟುಂಬದ ಸದಸ್ಯರು ನಾದಸ್ವರ ವಾದಕರಾಗಿ ಸೇವೆ ಸಲ್ಲಿಸುತ್ತಿರುವುದನ್ನು ಮರೆ ಮಾಚಿದರು.

ಧರ್ಮದ ಹೆಸರಿನಲ್ಲಿ ನೆತ್ತರಿನ ಒಕುಳಿಯಾಡಲು ಹೊರಟಿರುವ ಇಂತಹ ಅಯೋಗ್ಯರನ್ನು ಅವರು ಮಠಾಧೀಶರಾಗಿರಲಿ, ರಾಜಕಾರಣಿಯಾಗಿರಲಿ ಅಥವಾ ಹಿಂದೂ ಸಂಘಟನೆಗಳ ನಾಯಕರಾಗಿರಲಿ ಮಟ್ಟ ಹಾಕಬೇಕಾಗಿರುವುದು ನಮಮ್ಮೆಲ್ಲರ ಪ್ರಮುಖ ಆದ್ಯತೆಯಾಗಬೇಕಿದೆ….

ವರದಿ.ಪ್ರತಾಪ್, ಸಿ. ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *