;

ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಎರಡು ದಿನಗಳ ರಾಷ್ಟ್ರೀಯ ಕಾರ್ಯಗಾರ…!!!

ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಎರಡು ದಿನಗಳ ರಾಷ್ಟ್ರೀಯ ಕಾರ್ಯಗಾರ
ಡಿಎಂಎಫ್ ಅಡಿ ಗಣಿಬಾಧಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು:ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ
ಬಳ್ಳಾರಿ ಜಿಲ್ಲಾ ಖನಿಜ ನಿಧಿ ಅಡಿ ಜಿಲ್ಲೆಯಲ್ಲಿರುವ ಗಣಿಬಾಧಿತ ಪ್ರದೇಶಗಳಲ್ಲಿ ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ಕೌಶಲ್ಯಾಭಿವೃದ್ಧಿ, ಅಪೌಷ್ಠಿಕತೆ ನಿರ್ಮೂಲನೆ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಒದಗಿಸುವುದಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತಿದೆ ಮತ್ತು ಈ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿಗಳಾದ ಪವನ್‍ಕುಮಾರ್ ಮಾಲಪಾಟಿ ಹೇಳಿದರು.
ನಗರದ ಹೊರವಲಯದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಅಂಬೇಡ್ಕರ್ ಸಭಾಂಗಣದಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಮತ್ತು ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಿರುವ ‘ಭಾರತದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನದ ಉತ್ತಮ ಕಾರ್ಯಗಳು ಮತ್ತು ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‍ನ ಕಲಿಕೆಗಳು’ ಎಂಬ ವಿಷಯದ ಕುರಿತ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿವರ್ಷ ಜಿಲ್ಲಾ ಖನಿಜ ಪ್ರತಿಷ್ಠಾನಕ್ಕೆ ಸುಮಾರು 400ಕೋಟಿ ರೂ.ಗಳಷ್ಟು ಹಣ ಸಂಗ್ರಹವಾಗುತ್ತದೆ. ಈ ಹಣದಲ್ಲಿ ಗಣಿಗಾರಿಕೆಯಿಂದ ಬಾಧಿತರಾಗಿರುವ ಪ್ರದೇಶಗಳಲ್ಲಿ ವಾಸಿಸುವ ಜನರ ಮೂಲಸೌಕರ್ಯ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆ ರೂಪಿಸಲಾಗುತ್ತದೆ. ಮುಂದಿನ 3 ವರ್ಷದ ಕ್ರಿಯಾ ಯೋಜನೆಯನ್ನು ಏಕಕಾಲಕ್ಕೆ ರೂಪಿಸಿ ಹಂತ-ಹಂತವಾಗಿ ಅನುಷ್ಠಾನಕ್ಕೆ ತರಲು ಜಿಲ್ಲಾಡಳಿತ ಶ್ರಮಿಸುತ್ತಿದೆ ಎಂದರು.
ಜಿಲ್ಲೆಯ ಬಹುತೇಕ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗಿದ್ದು, ಮಕ್ಕಳ ಅಪೌಷ್ಠಿಕತೆ ನೀಗಿಸಲು ಬಾಲ ಚೈತನ್ಯ ಯೋಜನೆ ಜಾರಿಗೆ ತರಲಾಗಿದೆ. ಸುಮಾರು 800 ಮಕ್ಕಳು ಇದರ ಫಲಾನುಭವಿಗಳಾಗಿದ್ದಾರೆ ಎಂದು ಅವರು ವಿವರಿಸಿದರು.
ಸಂಡೂರಿನಲ್ಲಿ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆ ನಿರ್ಮಾಣ: ಗಣಿಗಾರಿಕೆ ತಾಲೂಕಾಗಿರುವ ಸಂಡೂರಿನಲ್ಲಿ ಮಲ್ಟಿ ಸ್ಟೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಆಸ್ಪತ್ರೆಯಿಂದ ಉಸಿರಾಟ ತೊಂದರೆಯಿಂದ ಬಳಲುವ ಆ ಪ್ರದೇಶದ ಜನರಿಗೆ ಅನುಕೂಲವಾಗಲಿದೆ ಎಂದರು.
ಬಳ್ಳಾರಿ ಜಿಲ್ಲಾ ಖನಿಜ ನಿಧಿ ಅಡಿ ಶಿಕ್ಷಣ ಕ್ಷೇತ್ರಕ್ಕೆ 226 ಕೋಟಿ ವ್ಯಯಿಸಲಾಗುತ್ತಿದ್ದು, ಇದರಿಂದ ಸರ್ಕಾರಿ ಪದವಿ ಕಾಲೇಜುಗಳು ಮತ್ತು ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ ಎಂದು ವಿವರಿಸಿದ ಅವರು ನಗರದ ಹೊರವಲಯದ ಮುಂಡರಗಿ ಪ್ರದೇಶದಲ್ಲಿ ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ 40-50 ಕೋಟಿ ರೂ.ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದರು.


ಕೇವಲ ತಾಲೂಕು ಅಥವಾ ಹೋಬಳಿ ಪ್ರದೇಶಗಳಷ್ಟೆ ಅಲ್ಲದೆ ನಗರ ಪ್ರದೇಶದಲ್ಲೂ ಜಿಲ್ಲಾ ಖನಿಜ ಪ್ರತಿಷ್ಠಾನ ವತಿಯಿಂದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಹಳ್ಳಿಗಳಲ್ಲಿರುವ ಫಲಾನುಭವಿಗಳಿಂದ ಅಭಿಪ್ರಾಯ ಸಂಗ್ರಹಿಸಲು ಸಮೀಕ್ಷೆ ನಡೆಸಲು ವಿಶ್ವವಿದ್ಯಾಲಯವು ಕೈಜೋಡಿಸಬೇಕು ಎಂದು ಅವರು ವಿವಿ ಕುಲಪತಿಗಳಿಗೆ ಕೇಳಿಕೊಂಡರು.
ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರಕ್ಕೆ ಚಾಲನೆ ನೀಡಿದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ವಿಷ್ಣುಕಾಂತ ಎಸ್.ಚಟಪಲ್ಲಿ ಅವರು ಮಾತನಾಡಿ,ಬಳ್ಳಾರಿಯಲ್ಲಿರುವ ಜವಳಿ ಉದ್ಯಮಕ್ಕೆ ಕೌಶಲ್ಯಾಭಿವೃದ್ಧಿಯ ಸ್ಪರ್ಶ ನೀಡಬೇಕು. ಜಿಲ್ಲಾ ಖನಿಜ ಪ್ರತಿಷ್ಠಾನವು ಸ್ಥಳೀಯ ವಿಶ್ವವಿದ್ಯಾಲಯದೊಂದಿಗೆ ಇದಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಡಿಪ್ಲೋಮಾ ಅಥವಾ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಪರಿಚಯಿಸುವುದರ ಜೊತೆಗೆ ಸಂಶೋಧನೆಗೆ ಧನಸಹಾಯ ಮಾಡಬೇಕು ಎಂದರು.
ಈ ಭಾಗದ ವಿಶ್ವವಿಖ್ಯಾತ ಹಂಪಿಯ ಕುರಿತಾದ ದಾಖಲೆಗಳು, ಮಾಹಿತಿಯನ್ನು ಸಂಶೋಧನೆ ನಡೆಸಿ ಅದನ್ನು ಡಿಜಿಟಲೀಕರಣಗೊಳಿಸಿರುವುದರಿಂದ ಪ್ರಪಂಚದಾದ್ಯಂತ ಹಂಪೆಯ ಖ್ಯಾತಿ ಮತ್ತಷ್ಟು ಪ್ರಸಿದ್ಧಗೊಳ್ಳುತ್ತದೆ ಎಂದರು.
ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಮೌಲ್ಯಯುತ, ಪುನರಾವರ್ತನೀಯ, ಉತ್ತಮ ಅಭ್ಯಾಸಗಳನ್ನು ಮುಖ್ಯವಾಹಿನಿಗೆ ತಂದು ರಾಷ್ಟ್ರವ್ಯಾಪಿ ಗುರುತಿಸುವ ಮಾದರಿಯೊಂದನ್ನು ಪರಿಚಯಿಸುವ ಕೆಲಸವು ವಿಜಯನಗರ ಶ್ರೀಕೃಷ್ಣದೇವರಾಜ ವಿಶ್ವವಿದ್ಯಾಲಯ ಹಾಗೂ ಡಿಎಂಎಫ್ ವತಿಯಿಂದ ನಡೆಯಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿಗಳಾದ ಪ್ರೊ. ಸಿದ್ದು ಪಿ ಆಲಗೂರ ಅವರು ಮಾತನಾಡಿ, ಡಿಎಂಎಫ್ ವತಿಯಿಂದ ವಿಶ್ವವಿದ್ಯಾಲಯದ ಆವರಣದಲ್ಲಿ ಆರೋಗ್ಯ ಕೇಂದ್ರವನ್ನು ನಿರ್ಮಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಜ್ಞಾನ ಪ್ರಸರಣಕ್ಕೆ ಹೆಚ್ಚಿನ ಒತ್ತು ನೀಡಲು ವಿಶ್ವವಿದ್ಯಾಲಯವು ಡಿಎಂಎಫ್ ಸಹಯೋಗದೊಂದಿಗೆ ಕೆಲಸಮಾಡಲು ಉತ್ಸುಕವಾಗಿದೆ. ಸಮುದಾಯ ಕೇಂದ್ರಿತ ಕಾರ್ಯಗಳನ್ನು ಜಾರಿಗೊಳಿಸಲು ವಿಶ್ವವಿದ್ಯಾಲಯವು ಎಲ್ಲ ಹಂತಗಳಲ್ಲಿ ಡಿಎಂಎಫ್ ಮತ್ತು ಜಿಲ್ಲಾಡಳಿತಕ್ಕೆ ಸಹಕಾರ ನೀಡಲಿದೆ ಎಂದು ಹೇಳಿದರು.
ಶೈಕ್ಷಣಿಕ ಹಾಗೂ ಸಂಶೋಧನಾ ಅಭಿವೃದ್ಧಿಗೆ ವಿಶ್ವವಿದ್ಯಾಲಯದಿಂದ ಮಂಡಿಸಲಾಗುವ ಪ್ರಸ್ತಾವನೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಕಾರ್ಯಾಗಾರದ ಸಂಚಾಲಕರಾದ ಪ್ರೊ. ಜೆ ತಿಪ್ಪೇರುದ್ರಪ್ಪ ಮಾತನಾಡಿ, ರಾಷ್ಟ್ರೀಯ ಕಾರ್ಯಾಗಾರವು ಕೇವಲ ಶಿಕ್ಷಣಾರ್ಥಿಗಳಿಗೆ ಸೀಮಿತವಾಗಿರದೆ ಆರೋಗ್ಯ, ಗಣಿಗಾರಿಕೆ, ಪರಿಸರ, ಕೌಶಲಾಭಿವೃದ್ಧಿ ಕ್ಷೇತ್ರಗಳ ಸಿಬ್ಬಂದಿ ಭಾಗವಹಿಸಿರುವುದು ವಿಶೇಷವಾಗಿದೆ. ಈ ಕಾರ್ಯಾಗಾರದಿಂದ ಡಿಎಂಎಫ್‍ಗೆ ಹೊಸದಿಕ್ಕು ಮತ್ತು ಹೊಸ ಯೋಜನೆಗಳನ್ನು ರೂಪಿಸಲು ಸಹಾಯವಾಗಲಿದೆ ಎಂದು ಹೇಳಿದರು.
ಹೈದರಾಬಾದ್ ಪ್ರಾಂತ್ಯದ ಯು.ಎಸ್.ಎ. ಅಂತರಾಷ್ಟ್ರೀಯ ಸೇವಾ ಸಹಭಾಗಿತ್ವದ ಮುಖ್ಯಸ್ಥರಾದ ಅನಿಲ್ ಆರ್.ಕೆ ಅವರು ದಿಕ್ಸೂಚಿ ಭಾಷಣ ಪ್ರಸ್ತುತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‍ನ ವಿಶೇಷಾಧಿಕಾರಿ ರಮೇಶ ಬಿ.ಎಸ್, ವಿತ್ತಾಧಿಕಾರಿ ಡಾ. ಕೆ ಸಿ ಪ್ರಶಾಂತ್ ವಿವಿಯ ಕುಲಸಚಿವರಾದ ಪ್ರೊ. ಎಸ್ ಸಿ ಪಾಟೀಲ್, ಕುಲಸಚಿವರಾದ(ಮೌಲ್ಯಮಾಪನ) ಪ್ರೊ.ರಮೇಶ್ ಓಲೇಕಾರ್, ಡಾ. ನಿರ್ಮಲಾ ಹಾಗೂ ವಿವಿಯ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಾಗಾರದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿರುವ 180ಕ್ಕೂ ಹೆಚ್ಚು ಜನ ಭಾಗವಹಿಸಿದ್ದಾರೆ.
ನಂತರ ಅಭಿವೃದ್ಧಿ ಮತ್ತು ಪರಿಸರ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ, ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನದ ಅಡಿ ಪರಿಸರ ಸಂರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣ ಕ್ರಮಗಳು, ಬಳ್ಳಾರಿ ಆರೋಗ್ಯ ಕ್ಷೇತ್ರದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನದ ಪಾತ್ರದ ಕುರಿತು ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡಿಸಿದರು….

ವರದಿ. ವಿರೇಶ್ ಹಳೇಕೋಟೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend