;

ಬಳ್ಳಾರಿಯಲ್ಲಿಯೇ ಮೆಣಸಿನಕಾಯಿ ಮಾರಾಟಕ್ಕೆ ಅಗತ್ಯ ಕ್ರಮ “ಬಳ್ಳಾರಿ ಉತ್ಸವ” ಅಗತ್ಯ ವರದಿ ನೀಡಿ…!!!

ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಬಳ್ಳಾರಿಯಲ್ಲಿಯೇ ಮೆಣಸಿನಕಾಯಿ ಮಾರಾಟಕ್ಕೆ ಅಗತ್ಯ ಕ್ರಮ
“ಬಳ್ಳಾರಿ ಉತ್ಸವ” ಅಗತ್ಯ ವರದಿ ನೀಡಲು ಸೂಚನೆ
ಬಳ್ಳಾರಿ ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ಉತ್ತೇಜಿಸುವ ಮತ್ತು ಸಂಸ್ಕøತಿಯನ್ನು ಹೆಚ್ಚಿನಮಟ್ಟದಲ್ಲಿ ಪ್ರತಿಬಿಂಬಿಸುವ ದೃಷ್ಟಿಯಿಂದ ಹಂಪಿ ಉತ್ಸವದ ಮಾದರಿಯಲ್ಲಿಯೇ “ಬಳ್ಳಾರಿ ಉತ್ಸವ’’ ನಡೆಸುವ ಅವಶ್ಯವಿದ್ದು,ಈ ಕುರಿತು ಅಗತ್ಯ ವರದಿ ನೀಡುವಂತೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಧ್ಯಾಹ್ನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಪ್ರತಿ ವರ್ಷ ಹಂಪಿ ಉತ್ಸವ ಮಾಡಲಾಗುತ್ತಿದ್ದು,ಈ ಬಾರಿ ವಿಜಯನಗರ ಜಿಲ್ಲೆಗೆ ಆ ಉತ್ಸವ ಬರುವುದರಿಂದ ನಮ್ಮ ಜಿಲ್ಲೆಯಲ್ಲಿಯೂ ಅದೇ ಮಾದರಿಯಲ್ಲಿ ಉತ್ಸವ ಮಾಡುವ ಅಗತ್ಯವಿದ್ದು,ಈ ಕುರಿತು ವರದಿಯನ್ನು ಶೀಘ್ರ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಳ್ಳಾರಿ ಜಿಲ್ಲೆಯ ಪ್ರವಾಸಿ ಸ್ಥಳಗಳ ಜೊತೆಗೆ ಹೊಸದಾಗಿ ಗುರುತಿಸಲಾಗಿರುವ 14 ಪ್ರವಾಸಿಸ್ಥಳಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಿ ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಅವರು ಸೂಚನೆ ನೀಡಿದರು.
ಹಂಪಿ ಧ್ವನಿ ಮತ್ತು ಬೆಳಕು ಮಾದರಿಯಲ್ಲಿಯೇ ಬಳ್ಳಾರಿ ಕೋಟೆ ಧ್ವನಿ ಮತ್ತು ಬೆಳಕು ಮಾಡುವುದಕ್ಕೆ ವಿವರವಾದ ವರದಿ ಸಲ್ಲಿಸಿ ಎಂದು ಹೇಳಿದ ಸಚಿವ ಶ್ರೀರಾಮುಲು ಅವರು ಸಂಗನಕಲ್ಲು ಗುಡ್ಡ,ಬೂದಿಗುಡ್ಡದ ಅಭಿವೃದ್ಧಿ ಕುರಿತು ಚರ್ಚಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಮೆಣಸಿನಕಾಯಿ ಮಾರುಕಟ್ಟೆ;ಅಗತ್ಯ ಕ್ರಮ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮೆಣಸಿನಕಾಯಿ ಬೆಳೆ ಬೆಳೆಯುವ ಪ್ರದೇಶ ಹೆಚ್ಚಾಗುತ್ತಿದ್ದು,ಇಲ್ಲಿ ಬೆಳೆದ ಮೆಣಸಿಕಾಯಿಗಳನ್ನು ಬ್ಯಾಡಗಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುವುದರ ಬದಲಿಗೆ ಇಲ್ಲಿಯೇ ವ್ಯಾಪಾರಿಗಳು ಖರೀದಿಸಲು ಅಗತ್ಯ ಮಾರುಕಟ್ಟೆ ಸ್ಥಾಪನೆಗೆ ಕ್ರಮವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಹೇಳಿದರು.
ಇದಕ್ಕೆ ಬೇಕಾದ ಜಾಗ ಹಾಗೂ ಪ್ರೋಸೆಸಿಂಗ್ ಸೆಂಟರ್ ಸೇರಿದಂತೆ ಇನ್ನೀತರ ಕ್ರಮಗಳನ್ನು ಆದ್ಯತೆ ಮೇರೆಗೆ ಮಾಡಲಾಗುವುದು ಎಂದು ಹೇಳಿದ ಸಚಿವ ಶ್ರೀರಾಮುಲು ಅವರು ಕಳೆದ ಬಾರಿ ಮೆಣಸಿನಕಾಯಿ ಬೀಜದ ಸಂದರ್ಭದಲ್ಲಿ ಉದ್ಭವಿಸಿದ್ದ ಸಮಸ್ಯೆಯನ್ನು ಈ ಬಾರಿ ಆಗದಂತೆ ನೋಡಿಕೊಳ್ಳಿ ಮತ್ತು ಈ ಕುರಿತು ಮೆಣಸಿನಕಾಯಿ ಬೀಜ ಪ್ರತಿನಿಧಿಗಳೊಂದಿಗೆ ಸಭೆ ಮಾಡಿ ಎಂದು ಅವರು ಸೂಚನೆ ನೀಡಿದರು.
ಒಂದು ಬೆಳೆ ಒಂದು ಉತ್ಪನ್ನದ ಅಡಿ ಬಳ್ಳಾರಿ ಜಿಲ್ಲೆಯಲ್ಲಿ ಅಂಜೂರು ಬೆಳೆ ಆಯ್ಕೆಯಾಗಿದ್ದು,ಇದರ ಪ್ರದೇಶ ಹೆಚ್ಚಳಕ್ಕೆ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸುವಂತೆ ಸೂಚಿಸಿದ ಅವರು ರೈತರಿಗೆ ಬೆಳೆವಿಮೆ ಕುರಿತು ಅರಿವು ಮೂಡಿಸುವ ಕೆಲಸ ಮಾಡಿ ಎಂದರು.
ಮುಂದಿನ ವಾರದಿಂದ ಜೋಳ,ಭತ್ತ ಖರೀದಿ: ಈಗಾಗಲೇ ಜಿಲ್ಲೆಯಲ್ಲಿ ಭತ್ತ ಮತ್ತು ಜೋಳ ಖರೀದಿಗೆ ಸಂಬಂಧಿಸಿದಂತೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು,ಮುಂದಿನ ವಾರದಿಂದ ಖರೀದಿ ಪ್ರಕ್ರಿಯೆ ಶುರುಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿನಿರ್ದೇಶಕ ಶ್ರೀಧರನ್ ಅವರು ತಿಳಿಸಿದರು.
538 ರೈತರು ಜೋಳ ಮತ್ತು 805 ರೈತರು ಭತ್ತ ಖರೀದಿಸುವಂತೆ ಕೋರಿ ಇದುವರೆಗೆ ನೋಂದಣಿ ಮಾಡಿಕೊಂಡಿರುವ ವಿಷಯವನ್ನು ಸಹ ಅವರು ಸಚಿವರ ಗಮನಕ್ಕೆ ತಂದರು.
48.90 ಕೋಟಿ ರೂ. ಬೆಳೆಹಾನಿ ಪರಿಹಾರ ರೈತರ ಖಾತೆಗೆ ಜಮಾ:ಜಿಲ್ಲೆಯಲ್ಲಿ ನವೆಂಬರ್ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿರುವುದನ್ನು;ಅದರಿಂದಾದ ಸಮಸ್ಯೆ ಮತ್ತು ಆಗಿರುವ ಹಾನಿಯ ಪ್ರಮಾಣವನ್ನು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಮತ್ತು ತೋಟಗಾರಿಕೆ ಇಲಾಖೆಯ ಶರಣಪ್ಪ ಭೋಗಿ ಅವರು ವಿವರಿಸಿದರು.
48068 ರೈತರ ಖಾತೆಗಳಿಗೆ ಎಸ್‍ಡಿಆರ್‍ಎಫ್ ನಿಯಮಾವಳಿಗಳನ್ವಯ 48.90 ಕೋಟಿ ರೂ.ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದರು.
ಆಧಾರ್ ಸೀಡಿಂಗ್ ಮತ್ತು ಬ್ಯಾಂಕ್‍ನಲ್ಲಿ ಮ್ಯಾಚ್ ಆಗದ ಕಾರಣ 3 ಸಾವಿರ ರೈತರಿಗೆ ಪರಿಹಾರ ಜಮಾ ಆಗಿಲ್ಲ;ಅಂತವರ ಪಟ್ಟಿ ತಯಾರಿಸಿದ್ದು ಗ್ರಾಮಲೆಕ್ಕಿಗರು ಮನೆ-ಮನೆಗೆ ತೆರಳಿ ಅವರ ವಿವರ ಸಂಗ್ರಹಿಸಿ ಪರಿಹಾರ ಒದಗಿಸಲು ಕ್ರಮವಹಿಸಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅವರು ವಿವರಿಸಿದರು.


ಪಿಎಂ-ಕಿಸಾನ್ ಯೋಜನೆ ಅಡಿ ಅವಳಿ ಜಿಲ್ಲೆಯ 2.18ಲಕ್ಷ ರೈತರಿಗೆ 326 ಕೋಟಿ ರೂ.ಬಂದಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಅವರು ಸಚಿವರಿಗೆ ತಿಳಿಸಿದರು.
ಕೃಷಿ,ರಾಷ್ಟ್ರೀಯ ಹೆದ್ದಾರಿಗಳು,ಯುವಜನರ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಆರೋಗ್ಯ, ಜಿಪಂ,ಮಹಾನಗರ ಪಾಲಿಕೆ, ಜಿಲ್ಲಾ ನಗರಾಭಿವೃದ್ಧಿ ಕೋಶ,ಕೊಳಗೇರಿ ಅಭಿವೃದ್ಧಿ ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಿದ ಸಚಿವ ಶ್ರೀರಾಮುಲು ಅವರು ಅಗತ್ಯ ಸಲಹೆ-ಸೂಚನೆ ಹಾಗೂ ನಿರ್ದೇಶನಗಳನ್ನು ಅಧಿಕಾರಿಗಳಿಗೆ ನೀಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ,ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಜಿಪಂ ಸಿಇಒ ಕೆ.ಆರ್.ನಂದಿನಿ, ಎಸ್ಪಿ ಸೈದುಲು ಅಡಾವತ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿಗೆಹ್ಲೋಟ್, ಸಹಾಯಕ ಆಯುಕ್ತ ಡಾ.ಆಕಾಶ ಶಂಕರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು…

 

ವರದಿ. ವಿರೇಶ್ ಹಳೇಕೋಟೆ, ಬಳ್ಳಾರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend