ನಿರಂತರ ಮಳೆಗೆ 17190 ಹೆಕ್ಟೇರ್ ಬೆಳೆ ಹಾನಿ,118 ಮನೆಗಳ ಹಾನಿ,69ಕುರಿ-ಮೇಕೆಗಳ ಸಾವು,ನದಿದಂಡೆಯಲ್ಲಿರುವ ಜನರು ಎಚ್ಚರದಿಂದಿರಲು ಜಿಲ್ಲಾಡಳಿತ ಸೂಚನೆ
ರೈತರೇ ಆತಂಕ ಬೇಡ;ಬೆಳೆಹಾನಿ ಜಂಟಿಸಮೀಕ್ಷೆ ವಾರದಲ್ಲಿ ಪೂರ್ಣ:ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ
ಬಳ್ಳಾರಿ,ನ.20 ಬಳ್ಳಾರಿ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ 17190 ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿದೆ. ಈಗಾಗಲೇ ಕಂದಾಯ ಇಲಾಖೆ,ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜಂಟಿ ಸಮೀಕ್ಷೆಯನ್ನು ಶುರುಮಾಡಿದ್ದು,ಒಂದು ವಾರದಲ್ಲಿ ಪೂರ್ಣಗೊಳಿಸಿ ಪರಿಹಾರ ಒದಗಿಸಲು ಕ್ರಮವಹಿಸಲಾಗುವುದು;ರೈತರು ಯಾವುದೇ ರೀತಿಯ ಆತಂಕಪಡಬೇಡಿ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಹಾನಿಯಾಗಿರುವ ಎಲ್ಲ ಹಳ್ಳಿಗಳ ಜಮೀನುಗಳಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಲಿದ್ದು, ಶೇ.33ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾದ ಬೆಳೆಗಳಿಗೆ ನಿಯಮಾನುಸಾರ ಪರಿಹಾರ ಒದಗಿಸಲಾಗುವುದು. ತಮ್ಮ ಹೊಲದಲ್ಲಿ ಹಾನಿಯಾಗಿದೆ ಅಂತ ಅನಿಸಿದ ರೈತರು ತಮ್ಮ ಊರಿಗೆ ಭೇಟಿ ನೀಡುವ ಈ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕರೆದುಕೊಂಡು ಹೋಗಿ ಸಮೀಕ್ಷೆ ಮಾಡಿಸಬಹುದಾಗಿದೆ; ಅವರು ತಮಗೆ ಸಹಕರಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇಷ್ಟೆಲ್ಲ ಪ್ರಮಾಣದ ಹಾನಿಯಾದರೂ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ ಎಂಬ ಆತಂಕ ರೈತರನ್ನು ಕಾಡುತ್ತಿದ್ದು;ರೈತರು ಯಾವುದೇ ರೀತಿಯ ಆತಂಕಪಡಬೇಡಿ ಎಂದು ಮನವಿ ಮಾಡಿದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಈ ಎಲ್ಲ ಜಂಟಿ ಸಮೀಕ್ಷೆಯನ್ನು ಒಂದು ವಾರದೊಳಗೆ ಪೂರ್ಣಗೊಳಿಸಿ ನಿಯಮಾನುಸಾರ ಪರಿಹಾರ ಒದಗಿಸಲು ಉದ್ದೇಶಿಸಲಾಗಿದೆ ಎಂದರು.
ನಾಳೆಯಿಂದ ಮಳೆ ಕಡಿಮೆಯಾಗಬಹುದು ಎಂದು ಹವಾಮಾನ ವರದಿ ಇದೆ. ಮುಂದಿನ ವಾರ ಹವಾಮಾನ ಕ್ಲೀಯರ್ ಆಗಬಹುದಾಗಿದೆ. ಬೆಳೆ ಹಾನಿಯಾಗಿರುವ ಎಲ್ಲ ಕಡೆಗೂ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
48 ಗಂಟೆಗಳಲ್ಲಿ 100 ಮನೆಗಳಿಗೆ ಹಾನಿ;17190 ಹೆಕ್ಟೇರ್ ಬೆಳೆಹಾನಿ:ಜಿಲ್ಲೆಯಲ್ಲಿ ಕಳೆದ 48 ಗಂಟೆಗಳಲ್ಲಿ ಸುರಿದ ಮಳೆಯಿಂದಾಗಿ ಅಂದಾಜು 40 ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿ ಬಟ್ಟೆ-ಆಹಾರ ಸಾಮಗ್ರಿಗಳಿಗೆ ಹಾನಿಯಾಗಿದೆ. 100 ಮನೆಗಳು ಭಾಗಷಃ ಹಾನಿ ಮತ್ತು ಒಂದು ಮನೆ ಸಂಪೂರ್ಣ ಹಾನಿಯಾಗಿದೆ. 69 ಕುರಿ-ಮೇಕೆಗಳು ಸಾವನ್ನಪ್ಪಿವೆ. ಕೃಷಿ ಇಲಾಖೆಯ ಬೆಳೆಗಳಾದ ಭತ್ತ 11030 ಹೆಕ್ಟೇರ್, 1209 ಹೆಕ್ಟೇರ್ ಕಡಲೆ,30 ಹೆಕ್ಟೇರ್ ಜೋಳ,110 ಹೆಕ್ಟೇರ್ ಹತ್ತಿ,9 ಹೆಕ್ಟೇರ್ ಕಬ್ಬು ಬೆಳೆ ಸೇರಿದಂತೆ ಒಟ್ಟು 12388 ಹೆಕ್ಟೇರ್ ಬೆಳೆಹಾನಿ ಹಾಗೂ ತೋಟಗಾರಿಕೆ ಇಲಾಖೆ ಬೆಳೆಗಳಾದ ಮೆಣಸಿನಕಾಯಿ 4758 ಹೆಕ್ಟೇರ್, 20 ಹೆಕ್ಟೇರ್ ಈರುಳ್ಳಿ ಮತ್ತು 24 ಹೆಕ್ಟೇರ್ ಪಪ್ಪಾಯ ಬೆಳೆ ಸೇರಿದಂತೆ ಒಟ್ಟು 4802 ಹೆಕ್ಟೇರ್ ಬೆಳೆಹಾನಿಯಾಗಿದೆ. 17190 ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ವಿವರಿಸಿದ್ದಾರೆ.
ಇನ್ನೂ ನೀರು ಹರಿಯುತ್ತಿರುವ ಕಾರಣ ಎಷ್ಟು ರಸ್ತೆಗಳು,ಸೇತುವೆಗಳಿಗೆ ಹಾನಿಯಾಗಿದೆ ಎಂಬುದು ಸರಿಯಾಗಿ ಗೊತ್ತಾಗಿಲ್ಲ;ಲೋಕೋಪಯೋಗಿ,ಪಿಆರ್ಇಡಿ ಇಲಾಖೆ ಹಾಗೂ ಎಲ್ಲ ಸಂಬಂಧಿಸಿದ ಇಲಾಖೆಗಳಿಂದ ಒಂದು ವಾರದೊಳಗೆ ಸಮೀಕ್ಷೆ ನಡೆಸಲಾಗುವುದು;ಆಗ ಯಾವ ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದು ಗೊತ್ತಾಗಲಿದೆ.
ನಾಳೆ ಇನ್ನಷ್ಟು ಪ್ರಮಾಣದಲ್ಲಿ ಹಾನಿಯ ಪ್ರಮಾಣ ತಿಳಿಯಲಿದ್ದು,ನಿಖರ ಮಾಹಿತಿ ಮತ್ತಷ್ಟು ಗೊತ್ತಾಗಲಿದ್ದು,ಮಾಹಿತಿ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಳೆದ 48 ಗಂಟೆಗಳಲ್ಲಿ ಬಳ್ಳಾರಿ ತಾಲೂಕಿನಲ್ಲಿ 146ಮೀ.ಮೀ, ಸಿರಗುಪ್ಪ-35.2ಮೀ.ಮೀ,ಸಂಡೂರು-50 ಮೀ.ಮೀ, ಕುರುಗೋಡು-52.1ಮೀ.ಮೀ,ಕಂಪ್ಲಿ-45ಮೀ.ಮೀ ಮಳೆಯಾಗಿದೆ. ಒಟ್ಟು ಜಿಲ್ಲೆಯಲ್ಲಿ ಸರಾಸರಿ 69.4ಮೀ.ಮೀ ಮಳೆಯಾಗಿದೆ.
*ತುಂಗಾಭದ್ರಾ ಡ್ಯಾಂನಿಂದ ನೀರು ಬಿಡುಗಡೆ;ಎಚ್ಚರದಿಂದರಲು ಜನರಿಗೆ ಸೂಚನೆ*: ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ಮಳೆ ಸುರಿಯುತ್ತಿರುವ ಕಾರಣ ತುಂಗಾಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈಗಾಗಲೇ ಡ್ಯಾಂ ಫುಲ್ ಆಗಿದೆ. ನೀರು ಜಾಸ್ತಿ ಬಂದರೇ ಜಲಾಶಯದಿಂದ ನೀರು ಹೊರಬಿಡಲಾಗುತ್ತದೆ. 1ಲಕ್ಷ ಕ್ಯೂಸೆಕ್ಗಿಂತ ಹೆಚ್ಚಿನಪ್ರಮಾಣದಲ್ಲಿ ನೀರು ಹೊರಬಿಟ್ಟಲ್ಲಿ ಕಂಪ್ಲಿ ಮತ್ತು ಸಿರಗುಪ್ಪ ತಾಲೂಕು ನದಿದಂಡೆ ಗ್ರಾಮದಲ್ಲಿ ನೀರು ಬರುವ ಸಾಧ್ಯತೆ ಇದ್ದು, ನಾಳೆಯಿಂದ ಎರಡ್ಮೂರು ದಿನ ನದಿದಂಡೆಯಲ್ಲಿರುವ ಜನರು ಅತ್ಯಂತ ಕೇರ್ಫುಲ್ ಆಗಿರಬೇಕು. ಜನರು ಕೂಡ ನದಿದಂಡೆಯತ್ತ ಹೋಗದೇ ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ.
ಅಗತ್ಯ ಬಿದ್ದರೇ ಗಂಜಿಕೇಂದ್ರಗಳು ತೆರೆದು ಜನರಿಗೆ ಸ್ಥಳಾಂತರಿಸಲು ಈಗಾಗಲೇ ತಹಸೀಲ್ದಾರರು,ಪಿಡಿಒ, ಗ್ರಾಮಲೆಕ್ಕಾದಿಗರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಇದ್ದರು…

ವರದಿ. ವಿರೇಶ್, ಹಳೇಕೋಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
