ಮೊಳಕಾಲ್ಮುರು: ಮೂಢನಂಬಿಕೆ ಮತ್ತು ಜಾಗೃತಿ ಕೊರತೆಯಿಂದಾಗಿ ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು.!
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಹಳ್ಳಿ ಹಳ್ಳಿಗಳಲ್ಲಿ, ಹೊಲಗಳಿಗೆ ಹೋಗಿ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಲಸಿಕೆ ನೀಡುತ್ತಿದ್ದಾರೆ. ಲಸಿಕೆ ಸಾಧನೆಯಲ್ಲಿ ಕೊನೆ ಸ್ಥಾನದಲ್ಲಿದ್ದ ತಾಲ್ಲೂಕಿನಲ್ಲಿ ಇದರಿಂದ ಪ್ರಗತಿ ಕಾಣುತ್ತಿದೆ. ಕೋವಿಡ್ ಅನ್ನು ನಿಯಂತ್ರಿಸಲು ಲಸಿಕೆ ಪರಿಣಾಮಕಾರಿ ಎಂದು ಸರ್ಕಾರ ಲಸಿಕೆ ಹಾಕಲು ಒತ್ತು ನೀಡಿದೆ.
ಆದರೆ, ಮೂಢನಂಬಿಕೆ ಮತ್ತು ಜಾಗೃತಿ ಕೊರತೆಯಿಂದಾಗಿ ಪ್ರಗತಿಯಲ್ಲಿ ಮೊಳಕಾಲ್ಮುರು ತಾಲ್ಲೂಕು ಜಿಲ್ಲೆಯಲ್ಲಿ ಕೊನೆಯ ಸ್ಥಾನದಲ್ಲಿತ್ತು. 15 ದಿನಗಳಿಂದ ಆಶಾದಾಯಕ ಪ್ರಗತಿ ಕಾಣುತ್ತಿರುವುದು ಹುರುಪು ತಂದಿದೆ. ಜನರು ಲಸಿಕೆ ಹಾಕಿಸಲು ಮಂದೆ ಬರುತ್ತಿರುವ ಕಾರಣ ಆರೋಗ್ಯ ಇಲಾಖೆ ಸಿಬ್ಬಂದಿಯಲ್ಲಿ ಮಂದಹಾಸ ಮೂಡಿದೆ. ಲಸಿಕೆ ಆರಂಭಿಕ ದಿನಗಳಲ್ಲಿ ಲಸಿಕೆ ಹಾಕಿಸಿಕೊಳ್ಳಿ ಎಂದರೆ ಸಾಕು ಜನರು ಜಗಳಕ್ಕೆ ಬರುತ್ತಿದ್ದರು. ಅನೇಕ ಕಡೆ ನಾವು ಹೋಗುವ ಹೊತ್ತಿಗೆ ಮನೆಗಳಿಗೆ ಬೀಗ ಹಾಕಿಕೊಂಡು ಹೋಗಿರುತ್ತಿದ್ದರು. ಇನ್ನು ಕೆಲವರು ನಮಗೆ ಏನಾದರೂ ಆದರೆ ಯಾರು ಗತಿ. ಮೊದಲು ₹ 25 ಲಕ್ಷದಿಂದ ₹ 50 ಲಕ್ಷ ಪರಿಹಾರ ಕೊಟ್ಟು ಹಾಕಿ ಎಂದು ಸಿಬ್ಬಂದಿ ಜತೆ ಜಗಳ ಕಾಯುತ್ತಿದ್ದರು. ಈ ವಿಡಿಯೊಗಳು ಸಾಕಷ್ಟು ವೈರಲ್ ಆಗಿದ್ದವು.
ತಾಲ್ಲೂಕಿನಲ್ಲಿ ಬುಡಕಟ್ಟು ಜನರು ಹೆಚ್ಚು ಇದ್ದಾರೆ. ವಿದ್ಯಾಭ್ಯಾಸದ ಕೊರತೆಯೂ ಇದೆ. ಜನರು ಹಟ್ಟಿ ಯಜಮಾನರು, ಮುಖಂಡರು ಹೇಳಿದಂತೆ ಕೇಳುತ್ತಿದ್ದರು. ಮುಖಂಡರು ಒಪ್ಪಿಗೆ ನೀಡದ ಹೊರತು ಜನರು ಹಾಕಿಸಿಕೊಳ್ಳುವುದಿಲ್ಲ ಎಂದು ಮುಖಂಡರ ಮನವೊಲಿಸುವ ಕೆಲಸ ಮಾಡುತ್ತಿದ್ದೇವೆ. ಇದು ಫಲ ನೀಡಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸುಧಾ ಹೇಳಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರ ಸಹಕಾರ ಪಡೆಯಲಾಗುತ್ತಿದೆ. ಲಸಿಕೆ ಪಡೆದಿರುವ ಸದಸ್ಯರು ಧೈರ್ಯ ಹೇಳುತ್ತಿರುವ ಕಾರಣ ಲಸಿಕೆ ಹಾಕಿಸಿಕೊಳ್ಳಲು ಜನರು ಒಪ್ಪಿಗೆ ನೀಡುತ್ತಿದ್ದಾರೆ. ತಾಲ್ಲೂಕಿನಲ್ಲಿ ರಾಮಸಾಗರ, ಜೀರಹಳ್ಳಿ, ಹುಚ್ಚಂಗಿದುರ್ಗ, ಚಿಕ್ಕೇರಹಳ್ಳಿ, ರೊಪ್ಪ, ಹನುಮಾಪುರ, ಮಾಚೇನಹಳ್ಳಿ ಸೇರಿ 18 ಗ್ರಾಮಗಳನ್ನು ಲಸಿಕೆ ನಿರ್ಲಕ್ಷಿಸುತ್ತಿರುವ ಗ್ರಾಮಗಳು ಎಂದು ಗುರುತಿಸಲಾಗಿತ್ತು. ಈಗ ಗ್ರಾಮಗಳಲ್ಲಿ ಹೆಚ್ಚು ಒತ್ತು ನೀಡಿದ್ದು, ಜನರು ಸ್ಪಂದಿಸುತ್ತಿದ್ದಾರೆ’ ಎಂದು ಅವರು ಹೇಳಿದರು…

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
