ಮಾನಸಿಕ ಒತ್ತಡದಲ್ಲಿರುವವರಿಗೆ ನೈತಿಕ, ಸಾಮಾಜಿಕ ಬೆಂಬಲ ನೀಡಿ
ಕೊಪ್ಪಳ : ಮಾನಸಿಕ ಒತ್ತಡದಲ್ಲಿ ಸಿಲುಕಿರುವವರಿಗೆ ನೈತಿಕ ಹಾಗೂ ಸಾಮಾಜಿಕ ಬೆಂಬಲ ನೀಡುವುದು ಸಮುದಾಯ ಕರ್ತವ್ಯವಾಗಿದೆ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ್ ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಇವರ ಸಹಯೋಗದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನಾಚರಣೆ ಅಂಗವಾಗಿ ನಗರದ ಸಾಹಿತ್ಯ ಭವನದಲ್ಲಿ ಸೆಪ್ಟೆಂಬರ್ 13ರಂದು ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಸಮಸ್ಯೆಗೆ ಆತ್ಮಹತ್ಯೆಯ ಪರಿಹಾರವಲ್ಲ. ಒಂಟಿ ಭಾವನೆ, ಸದಾ ಬೇಜಾರು ಇತರರಿಗೆ ಹೊರೆ ಎಂಬ ಭಾವನೆ, ಆತ್ಮಹತ್ಯೆಯ ಮಾರ್ಗಗಳ ಹುಡುಕಾಟ, ಮದ್ಯದಂತಹ ವ್ಯಸನಕಾರಿ ವಸ್ತುಗಳ ಸೇವನೆಯಲ್ಲಿ ಹೆಚ್ಚಳ, ಇವು ವ್ಯಕ್ತಿಯಲ್ಲಿ ಆತ್ಮಹತ್ಯೆಯ ಎಚ್ಚರಿಕೆಯ ಚಿಹ್ನೆಗಳಾಗಿರುತ್ತವೆ. ಆತ್ಮಹತ್ಯೆಗೆ ಪ್ರಮುಖ ಕಾರಣಗಳು ಹತಾಶೆ, ಉದ್ವೇಗ, ಪ್ರವೃತ್ತಿ, ತೀವ್ರ ಅನಾರೋಗ್ಯ ಜೀವನದ ಒತ್ತಡಗಳು, ಮಾನಸಿಕ ಸಮಸ್ಯೆಗಳು, ನಿಕಟ ವ್ಯಕ್ತಿಯ ಆತ್ಮಹತ್ಯೆ, ಮದ್ಯಪಾನ, ಮಾದಕ ವಸ್ತುಗಳ ಬಳಕೆ, ವ್ಯಸನ, ಇವು ಸಹ ಕಾರಣಗಳಾಗಿರುತ್ತವೆ ಎಂದು ತಿಳಿಸಿದರು.
ಯಾವುದೇ ಮೂಢನಂಬಿಕೆಗೆ ಒಳಗಾಗದೇ ಆತ್ಮಹತ್ಯೆಯ ಆಲೋಚನೆಯಿದ್ದಲ್ಲಿ ತಮ್ಮ ಆಪ್ತರೊಡನೆ ಹಂಚಿಕೊಳ್ಳಿ ಹಾಗೂ ತಪ್ಪದೇ ವೈದ್ಯರನ್ನು ಸಂಪರ್ಕಿಸಿ. ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನಾಚರಣೆಯ ಈ ವರ್ಷದ ಘೋಷವಾಕ್ಯ “ಕ್ರಿಯೆಯ ಮೂಲಕ ಭರವಸೆಯನ್ನು ಮೂಡಿಸುವುದು” ಎಂಬುವುದಾಗಿದೆ ಎಂದು ಹೇಳಿದರು.
ಗಂಗಾವತಿ ಉಪ ವಿಭಾಗ ಆಸ್ಪತ್ರೆಯ ಮನೋವೈದ್ಯರಾದ ಡಾ.ವಾದಿರಾಜ ಗೋರೆಬಾಳ ಅವರು ವಿಶೇಷ ಉಪನ್ಯಾಸ ನೀಡಿ, ಆತ್ಮಹತ್ಯೆಯ ಆಲೋಚನೆ ಇದ್ದ ವ್ಯಕ್ತಿಗೆ ಆತ್ಮಹತ್ಯೆಯ ಆಲೋಚನೆ ಕ್ಷಣಿಕವಾದದ್ದು. ಅವರಿಗೆ ಚಿಕಿತ್ಸೆ ನೀಡುವ ಮೂಲಕ ಹೊರಬರಬಹುದೆಂದು ಅರ್ಥಮಾಡಿಸುವುದು ಅಗತ್ಯವಾಗಿದೆ. ವ್ಯಕ್ತಿಗಳಲ್ಲಿ ಯಾವೂದೇ ರೀತಿಯ ಆತ್ಮಹತ್ಯೆಯ ಯೋಜನೆಗಳನ್ನು ಗುರುತಿಸಿ, ಅಂತಹ ವ್ಯಕ್ತಿಯನ್ನು ಒಂಟಿಯಾಗಿ ಬಿಡದೇ ಇರಬೇಕು. ಮನೋರೋಗ ತಜ್ಞರ ಅಥವಾ ಮಾನಸಿಕ ಆರೋಗ್ಯ ವೃತ್ತಿಪರರಿಂದ ಚಿಕಿತ್ಸೆ ಮಾರ್ಗದರ್ಶನ ಪಡೆಯಲು ಸಹಾಯ ಮಾಡಬೇಕು. ಯಾವುದೇ ರೀತಿಯ ಮಾನಸಿಕ ತೊಂದರೆ ಅಥವಾ ಆತ್ಮಹತ್ಯೆಯ ಆಲೋಚನೆ ಇದ್ದಲ್ಲಿ ಉಚಿತ ದೂರವಾಣಿ ಸಂಖ್ಯೆ 14416ಕ್ಕೆ ಕರೆ ಮಾಡಿ ಸೂಕ್ತ ಮಾರ್ಗದರ್ಶನ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ.ಪ್ರಕಾಶ ವಿ ಅವರು ಮಾತನಾಡಿ, ಆತ್ಮಹತ್ಯೆಯ ಆಲೋಚನೆ ಉಂಟಾದಲ್ಲಿ, ಮೊದಲು ಸಮಸ್ಯೆಗೆ ಪರಿಹಾರವಿದೆ ಎಂದು ಭಾವಿಸಬೇಕು. ಭಾವನೆಗಳನ್ನು ಕುಟುಂಬಸ್ಥರಲ್ಲಿ, ಸ್ನೇಹಿತರಲ್ಲಿ, ನಂಬಿಕಸ್ಥರಲ್ಲಿ ಹಂಚಿಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಉತ್ತಮ ಹವ್ಯಾಸಗಳನ್ನು ಬೆಳಸಿಕೊಳ್ಳುವ ಮೂಲಕ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ರವೀಂದ್ರನಾಥ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳಾದ ಡಾ.ಶಶಿಧರ ಆಲೂರು, ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ.ರಾಮಾಂಜಿನೇಯ ಸೇರಿದಂತೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು…

ವರದಿ. ಸಂಗೀತಾ ಪಾಟೀಲ್ ಕೊಪ್ಪಳ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
