ರೈತರು, ನಾಗರಿಕರನ್ನ ಕಟ್ಟಿ ಹಾಕುವ ಕೃಷಿ ಕಾಯ್ದೆಗಳು!!

ರೈತರು, ನಾಗರಿಕರನ್ನ ಕಟ್ಟಿ ಹಾಕುವ ಕೃಷಿ ಕಾಯ್ದೆಗಳು!!

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಹೊಸ ಕಾಯ್ದೆಗಳನ್ನು ತರುವ ಸಕಲ ಸಿದ್ಧತೆ ನಡೆಸಿಕೊಂಡಿತ್ತು. ಕೃಷಿ ವಲಯ ಮತ್ತು ಕಾರ್ಮಿಕ ವಲಯಗಳು ನೇರ ಗುರಿಯಾಗಿದ್ದವು. ಕೃಷಿ ಇಲಾಖೆಯಲ್ಲಿ ಹೊಸ ಕಾನೂನು ಪರಿಚಯಿಸುವುದಕ್ಕೆ ಪೂರ್ವಭಾವಿಯಾಗಿ ಕೆಲವು ಹೆಜ್ಜೆಗಳನ್ನು ಇರಿಸಿದ ಕೇಂದ್ರ ಸರ್ಕಾರ ಮೂರು ವರ್ಷಗಳ ಅವಧಿಯಲ್ಲಿ ರೈತರಷ್ಟೇ ಅಲ್ಲ ದೇಶದ ನಾಗರಿಕರನ್ನು ಕಟ್ಟಿಹಾಕುವಂತೆ ಮೂರು ಕಾಯ್ದೆಗಳನ್ನು ಜಾರಿಗೆ ತಂದವು.

ಕೃಷಿ ಕೇಂದ್ರಗಳು ಏಕಾಏಕಿ ಜಾರಿಯಾಗಲಿಲ್ಲ.  ಕೇಂದ್ರ ಸರ್ಕಾರ 2017ರಲ್ಲಿ ಮಾದರಿ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತು. ಈ ಕಾಯ್ದೆಯಂತೆ ಶಿಫಾರಸು ಮಾಡಲಾದ ಯಾವುದೇ ಕ್ರಮಗಳು ಜಾರಿಗೆ ತರಲಿಲ್ಲ. ಇದನ್ನು ಗಮನಿಸಿ ಕೇಂದ್ರ ಸರ್ಕಾರ 2019ರಲ್ಲಿ ಏಳು ಮುಖ್ಯಮಂತ್ರಿಗಳ ಸಮಿತಿ ರಚಿಸಿತು. ಹೊಸ ಕಾಯ್ದೆಗಳ ಜಾರಿ ಕುರಿತು ಚರ್ಚಿಸಿ. ಮುಖ್ಯವಾಗಿ ಕೃಷಿ ಉತ್ಪನ್ನ, ಮಾರಾಟ, ಸಂಗ್ರಹ, ಕೃಷಿ ಮಾರುಕಟ್ಟೆ, ಗುತ್ತಿಗೆ ಕೃಷಿಯಲ್ಲಿ ಸುಧಾರಣೆಗಳನ್ನು ಈ ಸಮಿತಿ ಚರ್ಚಿಸಿತ್ತು.

2020 ಸೆಪ್ಟೆಂಬರ್‌ 15ರಿಂದ 18ರ ನಡುವೆ ಅಧಿವೇಶನದಲ್ಲಿ ಮೂರು ಕಾಯ್ದೆಗಳನ್ನು ಒಳಗೊಂಡ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಅಲ್ಲಿ ಚರ್ಚೆಯೇ ಇಲ್ಲದೆ ಅಂಗೀಕಾರಗೊಂಡಿತು. ಸೆಪ್ಟೆಂಬರ್‌ 20 ಮತ್ತು 22ರ ನಡುವೆ ರಾಜ್ಯಸಭೆಯಲ್ಲೂ ಅಂಗೀಕಾರಗೊಂಡಿತು. ವಿರೋಧ ಪಕ್ಷಗಳ ತೀವ್ರ ವಿರೋಧ ನಡುವೆ ಈ ಕಾಯ್ದೆಗಳು ಜಾರಿಯಾಗಿದ್ದು, ತೀವ್ರವಾದ ಚರ್ಚೆಗೆ ಕಾರಣವಾಯಿತು. ಇಷ್ಟಾಗಿಯೂ ರಾಷ್ಟ್ರಪತಿಗಳು ಸೆಪ್ಟೆಂಬರ್‌ 28ರಂದು ಮಸೂದೆಗೆ ಅಂಕಿತ ಹಾಕಿದರು.

ರೈತ, ಕಾರ್ಮಿಕ ಹಾಗೂ ಮಧ್ಯಮ ವರ್ಗವನ್ನು ಅಪಾಯಕ್ಕೆ ತಳ್ಳುವ ಈ ಕಾಯ್ದೆಗಳ ವಿರುದ್ಧ ಪ್ರತಿಭಟನೆಗಳು ಆರಂಭವಾದವು. ದೆಹಲಿ ಹೋರಾಟದ ಕೇಂದ್ರವೂ ಆಯಿತು. ಇದೇ ವೇಳೆ ಬಿಜೆಪಿಯೇತರ ಸರ್ಕಾರಗಳು ಕೇಂದ್ರಕ್ಕೆ ಎದಿರೇಟು ನೀಡುವಂತೆ 3 ಕಾಯ್ದೆಗಳಿಗೆ ವಿರುದ್ಧವಾಗಿ ರೈತ ಪರ ಮಸೂದೆಗಳನ್ನು ಮಂಡಿಸಿದವು.

ಮೊದಲಿಗೆ ಕ್ಯಾಪ್ಟರ್‌ ಅಮರೀಂದರ್‌ ಸಿಂಗ್‌ ನೇತೃತ್ವದ  ಪಂಜಾಬ್‌ ಸರ್ಕಾರ ಕೇಂದ್ರ ಸರ್ಕಾರದ 3 ಕೃಷಿ ಕಾಯ್ದೆಗಳನ್ನು ತಿರಸ್ಕರಿಸಿ, ನಾಲ್ಕು ಮಸೂದೆಗಳನ್ನು ವಿಧಾನಸಭೆಯಲ್ಲಿ ಮಂಡಿಸಿತು. ಅದರಂತೆ; ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಮಾರಾಟ ಮಾಡುವಂತೆ ರೈತರಿಗೆ ಯಾವುದೇ ರೀತಿಯಲ್ಲಿ ಒತ್ತಡ ಹೇರಿದರೆ ಅದನ್ನು ಅಪರಾಧವೆಂದು ಪರಿಗಣಿಸಿ 3 ವರ್ಷಗಳ ಜೈಲು ಮತ್ತು ದಂಡ ತೆರಬೇಕಾಗುತ್ತದೆ. ಗುತ್ತಿಗೆ ಕೃಷಿಗೆ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳುವವರು ಕನಿಷ್ಠ ಬೆಂಬಲ ಬೆಲೆ ಅಥವಾ ಅದಕ್ಕಿಂತ ಹೆಚ್ಚಿನ ದರವನ್ನು ತರಬೇಕು. ನಿಯಮ ಉಲ್ಲಂಘಿಸಿದ್ದಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ. ಕೇಂದ್ರದ ಅಗತ್ಯವಸ್ತುಗಳ ಕಾಯ್ದೆಯ ಉಲ್ಲಂಘನೆಯಾದಲ್ಲಿ ಯಾವುದೇ ಶಿಕ್ಷಾರ್ಹ ಕ್ರಮಕೈಗೊಳ್ಳಲಾಗುವುದಿಲ್ಲ. ನಾಲ್ಕನೆಯದಾಗಿ ಕೇಂದ್ರದಿಂದ ಆಹಾರ ಖರೀದಿಗೆ ಸಂಬಂಧಿಸಿದಂತೆ ಮಸೂದೆಗಳನ್ನು ಮಂಡಿಸಿತು.

ಕೇಂದ್ರ ಸರ್ಕಾರ ರೈತರ ಮೇಲೆ ಬಲವಂತವಾಗಿ ಹೇರಲು ಹೊರಟ ಕೃಷಿ ಕಾಯ್ದೆಗಳಿಗೆ ಮೊದಲ ಶಾಸಕಾಂಗ ಪ್ರತಿರೋಧ ವ್ಯಕ್ತವಾಯಿತು. ಇದರ ಬೆನ್ನಲ್ಲೇ ಅಶೋಕ್‌ ಗೆಹ್ಲೋಟ್‌ ನೇತೃತ್ವದ ರಾಜಸ್ಥಾನ ಸರ್ಕಾರ ಕೂಡ ಕೇಂದ್ರ ಮೂರೂ ಕೃಷಿ ಕಾಯ್ದೆಗಳ ತಿದ್ದುಪಡಿಯನ್ನು ಮಂಡಿಸಿತು. ಬಿಜೆಪಿ ಶಾಸಕರ ತೀವ್ರ ವಿರೋಧದ ನಡುವೆ ಮಂಡನೆಯಾದ ಮಸೂದೆಗಳನ್ನು ರಾಜ್ಯಪಾಲರ ಅಂಕಿತಕ್ಕೆ ರವಾನಿಸಲಾಗಿತ್ತು.

ಪಂಜಾಬ್‌ ಮತ್ತು ರಾಜಸ್ಥಾನಗಳ ಹಾದಿ ಹಿಡಿದ ಛತ್ತಿಸ್‌ಗಢ ಸರ್ಕಾರ ಕೂಡ ಭೂಪೇಶ್‌ ಭಗೆಲ್‌ ಅವರ ನೇತೃತ್ವದಲ್ಲಿ ಮೂರು ಕಾಯ್ದೆಗಳ ತಿದ್ದುಪಡಿಯನ್ನು ಮಂಡಿಸಿತು. ಮೂರು ರಾಜ್ಯಗಳ ತಿದ್ದುಪಡಿಗಳು ರಾಜಭವನ ತಲುಪಿದವು. ಅಲ್ಲಿಂದ ರಾಷ್ಟ್ರಪತಿ ಭವನವನ್ನೂ ತಲುಪಿದವು. ನಿರೀಕ್ಷೆಯಂತೆ ರಾಷ್ಟ್ರಪತಿಗಳ ಅಂಕಿತ ದೊರೆಯಲಿಲ್ಲ.

ರೈತ ವಿರೋಧಿ ಎನ್ನಲಾದ ಕಾಯ್ದೆಗಳ ವಿಷಯದಲ್ಲಿ ಈ ರಾಜ್ಯಗಳು ತೆಗೆದುಕೊಂಡ ನಿರ್ಧಾರ ಹೋರಾಟ ನಿರತ ರೈತರ ಆತ್ಮವಿಶ್ವಾಸ ಹೆಚ್ಚಿಸಿದ್ದಲ್ಲದೆ, ರೈತನನ್ನು ಸಂಕಷ್ಟಕ್ಕೆ ತಳ್ಳುವ ಜೊತೆಗೆ ದೇಶದ ಆಹಾರಭದ್ರತೆ, ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಹಾಳು ಮಾಡುವ ಈ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸಿತು..

ವರದಿ. ಅಜಯ್, ಚ, ಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend